ಬುಧವಾರ, ಆಗಸ್ಟ್ 10, 2011

My rejoinder to reactions at Kendasampige.com

ಕೆಂಡಸಂಪಿಗೆ ಓದುಗರ ಪ್ರತಿಕ್ರಿಯೆಗೆ ಸಿದ್ದಾರ್ಥನ ಉತ್ತರ. ಮೊಟ್ಟ ಮೊದಲಿಗೆ ಸ್ಪಷ್ಟಪಡಿಸಿ ಬಿಡುತ್ತೇನೆ. ನನಗೆ ಯಡಿಯೂರಪ್ಪರವರ ಬಗ್ಗೆ ಯಾವ ಮಮಕಾರ ಇಲ್ಲ. ಅವರು ನಿರ್ಗಮಿಸಿದಕ್ಕೆ ಯಾವ ಪರಿತಾಪವೂ ಇಲ್ಲ. ಲೋಕಾಯುಕ್ತ ವರದಿಯಲ್ಲಿ ಧನ್ಯರಾಗಿರುವುದಕಿಂತಲೂ ಹೆಚ್ಚು ಪ್ರಮಾಣದಲ್ಲಿ, ಹೆಚ್ಚು ವ್ಯಾಪಕವಾಗಿ ಭ್ರಷ್ಟಾಚಾರ ಎಸಗಿರುವ ದಾಖಲೆ ಯಡಿಯೂರಪ್ಪನವರದ್ದು. ಅವರು ಅಧಿಕಾರಾವಧಿಯಲ್ಲಿ ನಡೆಸಿದ ಸೃಜನ ಪಕ್ಷಪಾತ, ಅಧಿಕಾರ ದುರುಪಯೋಗ, ಅಕ್ರಮ ಭೂಮಿಗ್ರಹಣ, ನಿಯಮಗಳ ಉಲ್ಲಂಘನೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಲ್ಲಿ ಯಾವ್ಯಾವ ಕಲಂಗಳಿವೆಯೋ ಅವೆಲ್ಲ ಕಾಯ್ದೆಯಡಿ ಶಿಕ್ಷೆಗೊಳಪಡಬೇಕಾದ ವ್ಯಕ್ತಿ. ಅವರ ವಿರುದ್ದ ೫ ಸಚಿವರ ಸಹಿತ, ೧೬ ಮಂದಿ ಶಾಸಕರು ಬಹಿರಂಗವಾಗಿ ಬಂಡಾಯವೆದ್ದಾಗ, ಸ್ಪೀಕರ್ ಅವರ ಸ್ಥಾನ ದುರುಪಯೋಗ ಪಡಿಸಿಕೊಂಡು, ವಿಧಾನ ಸಭೆಯಿಂದ ಹೊರಹಾಕಿ, ಪೊಲೀಸರನ್ನು ಒಳಸೇರಿಸಿಕೊಂಡು ವಿಶ್ವಾಸ ಮತ ಯಾಚನೆಯ ನಾಟಕವಾಡಿದಾಗ ಯಡಿಯೂರಪ್ಪ ಹೋಗಬೇಕಿತ್ತು. ಕರ್ನಾಟಕದ ಯಾರೊಬ್ಬರೂ ಕಣ್ಣಿರು ಹಾಕುತ್ತಿರಲಿಲ್ಲ. ಆದರೆ ನೈತಿಕವಲ್ಲದ ಕಾರಣಗಳಿಗಾಗಿ ಯಡಿಯೂರಪ್ಪನವರನ್ನು ಅಂದು ತೆಗೆಯದೇ ಮುಂದುವರಿಸಿದ ಬಿಜೆಪಿ ನಾಯಕರಿಗೆ ಈಗ ಅವರನ್ನು ಕಾಡುತ್ತಿರುವ ಮೌಲ್ಯಗಳು ಅಂದು ಕಾಡಲಿಲ್ಲ ಏಕೋ, ಏಕೆಂದರೆ ದಿನೇ-ದಿನೇ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಿರುವ ನರೇಂದ್ರ ಮೋದಿಯನ್ನು ಹಣಿಯಲು, ಉತ್ತರ ಪ್ರದೇಶದಲ್ಲಿ ಕುಸಿಯುತ್ತಿರುವ ಪಕ್ಷವನ್ನು ಮೇಲೆತ್ತಲು ದೆಹಲಿ ನಾಯಕರಿಗೆ ಯಡಿಯೂರಪ್ಪನ ಹಣ ಬಲದ ಅಗತ್ಯವಿತ್ತು. ಈಗ ಹಗರಣಭರಿತ ಯುಪಿಎ ಸರ್ಕಾರವನ್ನು ಮಣಿಸಿ, ಹೇಗಾದರೂ ಪ್ರಧಾನಿ ಗದ್ದುಗೆ ಹಿಡಿಯಬೇಕೆಂದು ಕಾಯುತ್ತಿರುವ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ನೆಗ್ಗಿಲು ಮುಳ್ಳಾಗಿ ಚುಚ್ಚುತ್ತಿರುವುದೇ ಈ ಅನಾಪೇಕ್ಷಣೀಯ ಪ್ರಸಂಗದ ಹಿಂದಿನ ವ್ಯೂಹ ರಚನೆ. ಈ ಅಗೋಚರ ವ್ಯೂಹದಲ್ಲಿ ನಮ್ಮ ಸತ್ಯ ಸಂಧ, ಅಮಾಯಕ ಲೋಕಾಯುಕ್ತರನ್ನು ದಾಳವಾಗಿ ಬಳಸಿಕೊಳ್ಳಲಾಯಿತಲ್ಲ ಎಂಬ ಕಹಿಸತ್ಯವನ್ನು ಒದುಗರಿಗೆ ಮನವರಿಕೆ ಮಾಡಿಕೊಡುವುದಷ್ಟೇ ನನ್ನ ಉದ್ದೇಶವಾಗಿತ್ತು. ಲೋಕಾಯುಕ್ತ ವರದಿಯ ಬಗ್ಗೆ ಆಕ್ಷೇಪಣೆ ಮುಂದುವರಿದೇ ಇದೆ. ರೆಡ್ಡಿ ಸಹೋದರರನ್ನು ಹಣಿಯಲು ಬಳ್ಳಾರಿ, ಸೋಮಣ್ಣ ಪುತ್ರರನ್ನು ಸಿಲುಕಿಹಾಕಿಸಲು ತುಮಕೂರು, ಜಿಲ್ಲೆಗಳ ಗಣಿಗಾರಿಕೆಯನ್ನು ವರದಿಯಲ್ಲಿ ಬಳಸಿಕೊಳ್ಳಲಾಯಿತೇ ಹೊರತಾಗಿ ಚಿತ್ರದುರ್ಗ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಗುಲಬರ್ಗಾ, ಬೆಳಗಾವಿ ಇಲ್ಲಿನ ಅಕ್ರಮಗಳು ಲೋಕಾಯುಕ್ತರ ಕಣ್ಣಿಗೆ ಬೀಳಲೇ ಇಲ್ಲವೇ? ಪ್ರಥಮ ವರದಿಯಲ್ಲಿ ತಪ್ಪತಸ್ಥರೆಂದು ಹೆಸರಿಸಲಾಗಿದ್ದ ಮಾಜಿ ಮುಖ್ಯ ಮಂತ್ರಿಯೊಬ್ಬರಿಗೆ ಮತ್ತೊಮ್ಮೆ ವಿಚಾರಣೆ ನಡೆಸಿ ಕ್ಲೀನ್ ಚಿಟ್ ನೀಡಲಾಗಿದೆ. ಅದರ ಅಗತ್ಯ ಇತ್ತೇ? ಇನ್ನೂ ಹಲವಾರು ರಾಜಕಾರಣಿಗಳು, ಅಧಿಕಾರಿಗಳು ಆರೋಪಿಗಳಾಗಿದ್ದಾರೆ. ಅವರು ಯಾರ‍್ಯಾರು ಎಂಬ ಬಗ್ಗೆ ಕೇವಲ guess workನಡೆದಿದೆಯೇ ಹೊರತಾಗಿ ಏಕೆ ಪೂರ್ತಿ ವರದಿ ಇನ್ನೂ ಸಿಗುತ್ತಿಲ್ಲ?. ವಾಸ್ತವವಾಗಿ ಲೋಕಾಯುಕ್ತ ವರದಿ ಯು.ವಿ.ಸಿಂಗ್ ಅವರ status reportಗೆ ಅಲ್ಲಲ್ಲಿ ಲೋಕಾಯುಕ್ತರು ಒಂದೆರಡು concluding para ಗಳನ್ನು ಸೇರಿಸಿದಂತೆ ಕಾಣುತ್ತದೆ. ವರದಿ ಹೇಗೆ ಸಾಂದರ್ಭಿಕವಾಗಿ ಯಡಿಯೂರಪ್ಪನವರನ್ನು ಹಣಿಯಾಗಲು ಪಕ್ಷ ಪಡಿಸಲಾಗಿದೆ ಎಂಬರ್ಥದ ಟಿಪ್ಪಣಿಯೊಂದನ್ನು ನನ್ನ ಪೇಸ್ ಬುಕ್‌ನಲ್ಲಿ ಆಗಸ್ಟ್ ೨೯ ರಂದು ರಾತ್ರಿ ಹಾಕಿದ್ದೆ. ಅದಕ್ಕೆ ಅಮೇರಿಕಾದಲ್ಲಿರುವ ನನ್ನ ಗೆಳತಿಯೊಬ್ಬರು ಪ್ರತಿಕ್ರಿಯಿಸಿದ್ದು ಹೀಗೆ.Any way, Yeddy should have gone long back”. ಎಂದೋ ಹೋಗಬೇಕಾಗಿದ್ದ ಯಡಿಯೂರಪ್ಪನವರನ್ನು ಇಂದು ಮನೆಗೆ ಕಳಿಸಲು ಲೋಕಾಯುಕ್ತರಂತಹ ಉನ್ನತ ಸಂಸ್ಥೆಯ ದುರ್ಬಳಕೆಯಾಗಬೇಕಿತ್ತೇ? ನೀವೇ ಹೇಳಿ?.(ಲೋಕಾಯುಕ್ತ ವರದಿಯನ್ನು ಯಾರಾದರೂ ಕೆಂಡಸಂಪಿಗೆ ಓದುಗರು ಓದ ಬಯಸಿದಲ್ಲಿ ಅದನ್ನು ಸಂಪಾದಕರಿಂದ ಮಿಂಚಂಚೆ ಮೂಲಕ ಪಡೆದುಕೊಳ್ಳಬಹುದು) . -ಸಿದ್ದಾರ್ಥ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ