ಗುರುವಾರ, ಆಗಸ್ಟ್ 4, 2011

ಸಂತೋಷ ನಿರ್ಗಮನ, ಸದಾನಂದ ಆಗಮನ:ಸಿದ್ದಾರ್ಥ ವ್ಯಾಖ್ಯಾನ
ಸಿದ್ಧಾರ್ಥ
ಗುರುವಾರ, 4 ಆಗಸ್ಟ್ 2011 (04:42 IST)
ಸಂತೋಷ ಹೆಗ್ಡೆ

ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬ ಪ್ರಶ್ನೆಯನ್ನಿಟ್ಟುಕೊಂಡು ಕಳೆದೊಂದು ವಾರದಿಂದ ಬಿಜೆಪಿ ಪಾಳಯದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳಿಗೆ ಕಡೆಗೂ ತೆರೆ ಬಿದ್ದಿತು. ಈ ಜಿದ್ದಾ ಜಿದ್ದಿನ ಬಲಾಬಲದ ಹೋರಾಟದಲ್ಲಿ ಯಾರ ಕೈ ಮೇಲಾಯಿತು, ಯಾರೂ ಎಡವಿದರು ಎಂಬ ವಿಶ್ಲೇಷಣೆಗೆ ಹೋಗದೆ ವೈಯಕ್ತಿಕ ಜೀವನದಲ್ಲಿ ಹಲವು ಕಷ್ಟ ನಷ್ಟಗಳಿಗೆ ಒಳಗಾಗಿ ನೋವು ಅನುಭವಿಸಿದರೂ ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳದ ಇಚ್ಚಾಶಕ್ತಿಯುಳ್ಳ ಸದಾ ನಗುಮಖದ ಡಿ.ವಿ.ಸದಾನಂದಗೌಡರು ಈ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಕ್ಕಾಗಿ ಅಭಿನಂದಿಸೋಣ. ಉಳಿದ ಅಧಿಕಾರವಧಿಯಲ್ಲಿ ಅವರು ಸದಾ ನಗುತ್ತಿರಲಿ ಸಿಕ್ಕ ಸದಾವಕಾಶವನ್ನು ಬಳಸಿಕೊಂಡು ಜನಪರ ಕಾರ್ಯಗಳನ್ನು ಮಾಡಿ ಈ ರಾಜ್ಯದ ಪ್ರತಿ ಪ್ರಜೆಯ ಮುಖದಲ್ಲೂ ನಗು ಅರಳಿಸಲೆಂದು ಹಾರೈಸೋಣ.

ಈ ಹಿಂದಿನ ಲೇಖನದಲ್ಲಿ ನಾನು ವ್ಯಕ್ತಪಡಿಸಿದ್ದ ಸಂಶಯ ನಿಜವಾಗಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪಡೆದಿದ್ದ ವಿಹಾರದ ರಜೆ ಅವರಿಗೆ ಸಾಕಷ್ಟು ದುಬಾರಿಯಾಗಿಯೇ ಪರಿಣಮಿಸಿತು. ನಾನು ದೇವರ ದಿಂಡರನ್ನು ಅಷ್ಟಾಗಿ ನಂಬುವುದಿಲ್ಲವಾದರು ಯಡಿಯೂರಪ್ಪನವರು ರಜೆಯ ನೆಪದಲ್ಲಿ ಮಾರಿಷಸ್ ವಿಮಾನ ಹತ್ತುವ ಗಳಿಗೆಯಿಂದ ಹಿಡಿದು ಮರಳಿ ಬೆ೦ಗಳೂರಿನ ನೆಲದ ಮೇಲೆ ಕಾಲಿರಿಸುವ ವೇಳೆಯ ನಡುವೆ ಊಹಿಸಲಾರದಷ್ಟು ವೇಗದಲ್ಲಿ ಘಟನೆಗಳು ಒಂದಾದ ಮೇಲೊಂದರಂತೆ ನಡೆದು ಅವರ ಹಣೆಬರಹ ಖಚಿತವಾಗಿ ಬಿಟ್ಟಿತು. ಈ ಹಿಂದೆಯೇ ಹೆಣೆದ ಸೂತ್ರ ಒಂದಕ್ಕೆ ಅಂಟಿಕೊಂಡಂತೆ ಘಟನೆಗಳು ನಡೆದು ಮುಖ್ಯಮಂತ್ರಿಯೊಬ್ಬರ ನಿರ್ಗಮನಕ್ಕೆ ಕಾರಣವಾಯಿತಲ್ಲದೆ, ರಾಜ್ಯದಲ್ಲಿ ಹೊಸತೊಂದು ಇತಿಹಾಸ ಸೃಷ್ಟಿಯಾಯಿತು.

ಯಡಿಯೂರಪ್ಪನವರ ರಾಜೀನಾಮೆಗೆ ಕಾರಣವಾದ ಲೋಕಾಯುಕ್ತ ವರದಿ ಅಡ್ವಾಣಿ ಪ್ರೇರಿತ ವರದಿಯೆಂದು ಕಾಂಗ್ರೆಸ್ ನಾಯಕ ಬಿ,ಕೆ. ಹರಿಪ್ರಸಾದ್ ಹೇಳಿರುವ ಸಂದರ್ಶನವೊಂದು ಪತ್ರಿಕೆಯಲ್ಲಿ ಪ್ರಕಟವಾಗಿದೆ. ಯಡಿಯೂರಪ್ಪ ಹಾಗೂ ತಮಗೆ ಬೇಡವಾದ ಕೆಲವರನ್ನು ಇಳಿಸಲು ವರದಿಯನ್ನು ಬಳಸಿಕೊಳ್ಳಲಾಯಿತು, ಸಂತೊಷಹೆಗ್ಡೆ ಪ್ರಚಾರಪ್ರಿಯ ವ್ಯಕ್ತಿ, ರಾಜಕೀಯಪ್ರೇರಿತ ವ್ಯಕ್ತಿ ಎಂದಿದ್ದಾರೆ.

ಹರಿಪ್ರಸಾದ್ ಅವರು ಮೂರು ದಶಕಗಳಿಂದಲೂ ರಾಜ್ಯದ ರಾಜಕಾರಣದಲ್ಲಿ ಸಕ್ರಿಯವಾಗಿರುವ ವೈಯಕ್ತಿಕವಾಗಿಯೂ, ರಾಜಕೀಯವಾಗಿಯೂ ಸಾಕಷ್ಟು ನಿಸ್ಪೃಹತೆ ಹಾಗೂ ಪ್ರಾಮಾಣಿಕತೆಗಳನ್ನು ಇಟ್ಟುಕೊಂಡವರು. ಈ ಹಿನ್ನಲೆಯಲ್ಲಿ ಲೋಕಾಯುಕ್ತ ಕುರಿತ ಅವರ ಆರೋಪ ಕೇವಲ ಕುಹಕ ಎಂದು ಯಾರೂ ತಳ್ಳಿ ಹಾಕುವಂತಿಲ್ಲ.

ಕೇವಲ ಘಟನೆಗಳತ್ತ ಒಮ್ಮೆ ಕಣ್ಣು ಹಾಯಿಸುತ್ತಾ ಹೋಗೋಣ.

ಯಡಿಯೂರಪ್ಪ ತಂಡ ಪ್ರವಾಸ ಹೊರಡುತ್ತದೆ. ಮರು ದಿನವೇ ಲೋಕಾಯುಕ್ತ ವರದಿಯ ಬಹುಪಾಲು ಅಂಶಗಳು ಒಂದೇ ದಿನ ಬೆಳಕಿಗೆ ಬರುವಂತೆ ‘ಲೀಕ್’ ಆಗುತ್ತದೆ. ಇದರ ಬೆನ್ನಲ್ಲೆ ತಮ್ಮ ದೂರವಾಣಿಯನ್ನು ಕದ್ದಾಲಿಸಲಾಗುತ್ತಿದೆ ಎಂದು ಸ್ವಯಂ ಸಂತೋಷ ಹೆಗ್ಡೆಯವರೇ ಪತ್ರಿಕೆಯ ಮುಂದೆ ಹೇಳಿಕೊಳ್ಳುತ್ತಾರೆ. ಎಂದಿನಂತೆ ಕಾಂಗ್ರೆಸ್ ಪಕ್ಷ ವರದಿ ಲೀಕಾದ ಬಗ್ಗೆ, ಫೋನ್ ಕದ್ದಾಲಿಸಿದ ಬಗ್ಗೆ ಸಿ.ಬಿ.ಐ. ತನಿಖೆಗೆ ಆಗ್ರಹಪಡಿಸಿ ಕರ್ತವ್ಯ ನಿರ್ವಹಣೆಯ ಸಮಾದಾನದಲ್ಲಿ ತೇಲಾಡುತ್ತದೆ.

ಫೋನ್ ಕದ್ದಾಲಿಕೆ ಕುರಿತ ಪತ್ರಿಕಾ ವರದಿಗಳು ಮುಗುಂ ಆಗಿ ಕದ್ದಾಲಿಕೆಯ ಎರಡು ಸ್ಥಾನಗಳನ್ನು ಹೆಸರಿಸುತ್ತವೆ. ಚಾಮರಾಜಪೇಟೆ ಹಾಗೂ ಆರ್.ಎಂ.ವಿ. ಬಡಾವಣೆಯ ಮನೆಯೊಂದರಿಂದ ಈ ಕದ್ದಾಲಿಕೆ ನಡೆಯುತ್ತಿದೆ ಎಂಬರ್ಥದ ವರದಿಗಳು ಪ್ರಕಟಗೊಳ್ಳುತ್ತಾ ಸುದ್ದಿ ಓದಿದವರಿಗೆ ಚಾಮರಾಜಪೇಟೆಯಲ್ಲಿ ಇರುವುದು ಆರ್.ಎಸ್.ಎಸ್. ಕೇಂದ್ರ ಕಛೇರಿ ಮತ್ತೊಂದು ಕಡೆ ಇರುವುದು ಯಡಿಯೂರಪ್ಪನವರ ಖಾಸಗಿ ನಿವಾಸವೆಂಬ ಸಂಗತಿ ಊಹಿಸಿಕೊಳ್ಳದೆಯೇ ಅರ್ಥವಾಗಿಬಿಡಬೇಕು ಅಷ್ಟು ಸರಳವಾಗಿ ಸುದ್ದಿಯನ್ನು ಮುಚ್ಚಿ ಬಿಚ್ಚಿಡುತ್ತವೆ ನಮ್ಮ ವರದಿಗಳು.

ಈ ಮಧ್ಯೆ ವರದಿ ಲೀಕಾದ ಘಟನೆಯ ನೈತಿಕ ಹೊಣೆಯನ್ನು ಲೋಕಾಯುಕ್ತರು ತಾವೇ ಹೊರುತ್ತಾರೆ. ಅದಕ್ಕಾಗಿ ಬಹಿರಂಗವಾಗಿ ಕಣ್ಣೀರು ಸುರಿಸುತ್ತಾರೆ. ತಮ್ಮ ಬೆಂಬಲಿಗ ಅಧಿಕಾರಿಗಳಿಗೆ ಬೆದರಿಕೆ ದೂರು ಬರುತ್ತಿರುವ ಹಿನ್ನಲೆಯಲ್ಲಿ ರಕ್ಷಣೆ ನೀಡಬೇಕೆಂಬ ಹೊಸ ಬೇಡಿಕೆಯನ್ನು ಸರ್ಕಾರದ ಮುಂದಿಡುತ್ತಾರೆ.

ಕಡೆಗೂ ಅಧಿಕೃತ ವರದಿ ಹೊರಬರುತ್ತದೆ. ೨೫,೮೨೨ ಪುಟಗಳ ಈ ವರದಿಯ ಮೂರು ಪ್ರತಿಗಳು ತಲಾ ೯೩ ಸಂಪುಟಗಳಲ್ಲಿ ಸಿದ್ಧಗೊಂಡು ಅವುಗಳಲ್ಲಿ ಒಂದನ್ನು ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗುತ್ತದೆ. ತದ ನಂತರದ ಪತ್ರಿಕಾಗೋಷ್ಟಿಯಲ್ಲಿ ಯಡಿಯೂರಪ್ಪ ಮತ್ತವರ ಸಂಪುಟ ಸಹುದ್ಯೋಗಿಗಳ ವಿರುದ್ಧ ಟೀಕಾಪ್ರಹಾರವನ್ನು ನಡೆಸುತ್ತಾರೆ. ವರದಿಯ ಪ್ರತಿ ಕೇಳಿದವರಿಗೆ ಮಾಹಿತಿ ಹಕ್ಕು ಖಾಯ್ದೆಯಡಿ ಹಣ ತುಂಬಿ ಪಡೆಯಬಹುದೆಂದು ಹೇಳಲಾಗುತ್ತದೆ. ಮುಖ್ಯಮಂತ್ರಿಯವರ ಅವ್ಯವಹಾರಗಳಿಗೆ ಕುರಿತಾದ ಭಾಗಗಳು ಮಾತ್ರ ಎಲ್ಲಾ ಪತ್ರಿಕೆಗಳಿಗೂ ಮುಂಚಿತವಾಗಿಯೆ ಸಿಗುವಂತೆ ನೋಡಿಕೊಳ್ಳಲಾಗುತ್ತದೆ. ಅಷ್ಟೇ ಏಕೆ ಅಧಿಕೃತವರದಿಯನ್ನು ಕೈಯಲ್ಲಿಟ್ಟುಕೊಂಡು ಯಡಿಯೂರಪ್ಪ ದೆಹಲಿ ತಲುಪುವ ವೇಳೆಗಾಗಲೇ ಈ ಆಯ್ದ ಭಾಗಗಳು ಇಂಟರ್‌ನೆಟ್ ಮೂಲಕ ದೆಹಲಿ ನಾಯಕರ ಕೈಗಳಲ್ಲಿ ರಾರಾಜಿಸುತ್ತಿರುತ್ತದೆ.

ನಾಲ್ವರು ಕುರುಡರು ಆನೆಯೊಂದನ್ನು ಮುಟ್ಟಿ ವರ್ಣಿಸಿದ ಕತೆ ನೀವೆಲ್ಲರೂ ಕೇಳಿಯೇ ಇದ್ದೀರಿ. ಲೋಕಾಯುಕ್ತ ವರದಿಯ ವಿಷಯದಲ್ಲಿ ಈ ಕತೆ ಪದೇ ಪದೇ ನೆನಪಿಗೆ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ.

ಏಕೆಂದರೆ ಅಧಿಕೃತ ವರದಿ ಬಿಡುಗಡೆಯಾಗಿ ವಾರ ಸಂದರೂ ಯಾವುದೇ ಪತ್ರಿಕೆಗೆ ವರದಿಯ ಪೂರ್ಣ ಪ್ರತಿ ಸಿಕ್ಕಿಯೇ ಇಲ್ಲಾ. ತಮ್ಮ ತಮ್ಮ ಸುದ್ದಿ ಮೂಲಗಳಿಂದ ಸಿಕ್ಕ ಅಪೂರ್ಣ ಮಾಹಿತಿಯನ್ನಾದರಿಸಿ, ಪತ್ರಿಕಾ ವರದಿಗಳು ಹೊರಬಂದು ಹೊರತಾಗಿ ನಾನು ವಿಚಾರ ವಿನಿಮಯ ನಡೆಸಿದ ಯಾವೊಬ್ಬ ಪತ್ರಕರ್ತನು ನಾನು ಪೂರ್ಣ ವರದಿಯನ್ನು ನೋಡಿದ್ದೇನೆ ಅಥವಾ ಓದಿದ್ದೇನೆ ಎಂದು ಹೇಳುವ ಎದೆಗಾರಿಕೆ ಯಾರೂ ತೋರಿಸಿರಲಿಲ್ಲ. ಪತ್ರಕರ್ತರಿರಲಿ, ಸ್ವಯಂ ಸಂತೋಷ ಹೆಗಡೆಯವರೇ ತಾವು ನೀಡಿರುವ ೨೫,೮೨೨ ಪುಟಗಳ ವರದಿಯನ್ನು ಸಂಪೂರ್ಣವಾಗಿ ಓದಿದ್ದಾರೆಯೇ? ಎಂಬ ಬಗ್ಗೆಯೂ ನನಗೆ ನನ್ನದೆ ಆದ ಅನುಮಾನಗಳಿವೆ.

ನಾನು ಲೋಕಾಯುಕ್ತ ಕಛೇರಿಯಲ್ಲಿ ವಿಚಾರಿಸಿದೆ. ನೀವು ಮಾಹಿತಿ ಹಕ್ಕು ಕಾಯಿದೆಯಡಿ ಪುಟಕ್ಕೆ ೨ ರೂಗಳಂತೆ ಅಂದರೆ (ಸುಮಾರು ೫೧,೬೪೪ರೂಪಾಯಿ) ಕಟ್ಟಿ. ವರದಿ ಸಿದ್ಧಗೊಂಡಂತೆಲ್ಲ ಡಿವಿಡಿ ರೂಪದಲ್ಲಿ ಪ್ರತಿ ನೀಡಲಾಗುತ್ತದೆ. ಯಾವ ಕಾರಣಕ್ಕೂ ಪ್ರಿಂಟೆಡ್ ಪ್ರತಿ ತಕ್ಷಣದಲ್ಲಿ ಸಿಗುವುದು ಸಾಧ್ಯವಿಲ್ಲ.

ವರದಿ ಪ್ರಕಟಗೊಂಡ ನಂತರ ಎಷ್ಟು ಮಂದಿ ಪ್ರತಿ ಕೇಳಿ ಹಣ ಸಲ್ಲಿಸಿದ್ದಾರೆ? ಅರ್ಜಿ ಕೊಟ್ಟಿದ್ದಾರೆ? ಎಷ್ಟು ಹಣ ಲೋಕಾಯುಕ್ತರ ಬೊಕ್ಕಸಕ್ಕೆ ಹರಿದು ಬಂದಿದೆ ಎಂಬ ಪ್ರಶ್ನೆಗೆ ೧೫ ದಿನಗಳಲ್ಲಿ ಉತ್ತರ ದೊರಕಿಸಿಕೊಡುವ ಭರವಸೆಯೂ ಬಂದಿದೆ.

ಇನ್ನು ದೆಹಲಿ ವಿದ್ಯಮಾನಗಳತ್ತ ನೋಡೋಣ ಕೇವಲ ಪತ್ರಿಕಾ ವರದಿಗಳನ್ನು ಆದರಿಸಿ ಹೇಳುವುದಾದರೆ ಈ ಬಾರಿ ಯಡಿಯೂರಪ್ಪ ಹೋಗಲೇಬೇಕೆಂಬ ಹಠಕ್ಕೆ ವರಿಷ್ಠ ನಾಯಕ ಅಡ್ವಾಣಿಯವರು ಬಂದಿದ್ದರು. ಒಂದು ವೇಳೆ ಅವರನ್ನು ಬಚಾವು ಮಾಡಲು ಇತರರು ಪ್ರಯತ್ನಿಸುವುದೇ ಆದರೆ ತಾವು ರಾಜಕೀಯ ಸನ್ಯಾಸ ಸ್ವೀಕರಿಸುವ ಬೆದರಿಕೆ ಹಾಕಿದ್ದರು. ಯಡಿಯೂರಪ್ಪ ಜಿಗುಟುತನ ತೋರುತ್ತಿದ್ದ ಅವಧಿಯಲ್ಲಿ ಸರ್ಕಾರ ಬಿದ್ದರೂ ಚಿಂತೆ ಇಲ್ಲ ಯಡಿಯೂರಪ್ಪರವರನ್ನು ವಜಾ ಮಾಡಿ ಎಂಬ ಆದೇಶ ಕೂಡ ಅವರಿಂದ ಬಂದಿತ್ತಂತೆ. ಯಡಿಯೂರಪ್ಪ ಮನೆಗೆ ಹೋಗುವ ತನಕ ತಾವು ಲೋಕಸಭೆಗೆ ಕಾಲಿಡುವುದಿಲ್ಲ ಎಂದೂ ಕೂಡ ಅಡ್ವಾಣಿ ಹೇಳಿದ್ದರಂತೆ.

ಅಂತೂ ಇಂತೂ ವರದಿ ಸಲ್ಲಿಕೆಯಾಯ್ತು. ಯಡಿಯೂರಪ್ಪ ಮನೆಗೆ ಹೊರಟರು. ಇನ್ನು ವರದಿಯ ಉಳಿದ ಅಂಶಗಳನ್ನು ಬಹಿರಂಗ ಪಡಿಸುವ ಅಗತ್ಯವಾದರು ಏನಿದೆ ಎಂಬ ತಟಸ್ಥ ಧೋರಣೆಗೆ ಪತ್ರಕರ್ತರು, ಪತ್ರಿಕೆಗಳು ಮರಳುತಿದ್ದಾವೆ.

ಸಂತೋಷ ಹೆಗ್ಗಡೆ ನಿರ್ಗಮಿಸಿ ಆಯ್ತು ಶಿವರಾಜ ಪಾಟೀಲರು ಬಂದಾಯ್ತು. ಗಣಿ ಕುರಿತ ವರದಿಯ ಬಗ್ಗೆ ನೂತನ ಲೋಕಾಯುಕ್ತರು ಯಾವ ನಿಲುವು ತಾಳಬಹುದೆಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

ಇಷ್ಟೆಲ್ಲಾ ಹೇಳಿದ ಮೇಲೆ ಸಂತೋಷ ಹೆಗ್ಗಡೆ ಕುರಿತ ಹರಿಪ್ರಸಾದ್ ಅವರ ಆರೋಪ ಕೇವಲ ಸುಳ್ಳು ಎಂದು ಯಾವ ಬಾಯಲ್ಲಿ ಹೇಳೋಣ.

ಪುಟದ ಮೊದಲಿಗೆ
Votes: 1 Rating: 3
ಹರಿಪ್ರಸಾದ್ ಅವರು ಮೂರು ದಶಕಗಳಿಂದಲೂ ರಾಜ್ಯದ ರಾಜಕಾರಣದಲ್ಲಿ ಸಕ್ರಿಯವಾಗಿರುವ ವೈಯಕ್ತಿಕವಾಗಿಯೂ, ರಾಜಕೀಯವಾಗಿಯೂ ಸಾಕಷ್ಟು ನಿಸ್ಪೃಹತೆ ಹಾಗೂ ಪ್ರಾಮಾಣಿಕತೆಗಳನ್ನು ಇಟ್ಟುಕೊಂಡವರು. ಈ ಹಿನ್ನಲೆಯಲ್ಲಿ ಲೋಕಾಯುಕ್ತ ಕುರಿತ ಅವರ ಆರೋಪ ಕೇವಲ ಕುಹಕ ಎಂದು ಯಾರೂ ತಳ್ಳಿ ಹಾಕುವಂತಿಲ್ಲ. ಕೆಂಡಸಂಪಿಗೆಯಲ್ಲಿ ಇಂತಹ ಲೇಖನ ನೋಡಿ ಬೇಸರವಾಯ್ತು...
ಮೊನ್ನಿನ ಘಟನೆಗಳ ಕುರಿತು ಕೆಲ ಹಿಂದಿ ನ್ಯೂಸ್ ಚಾನೆಲ್ ಗಳನ್ನ ನಾನು ವೀಕ್ಷಿಸುತ್ತಿದ್ದೆ. ಕರ್ನಾಟಕದ “ಆ” ಸುದ್ದಿಗಳನ್ನವರು - “ಕರ್ನಾಟಕ್ ಕೀ ನಾಟಕ್” ಎಂದು ಹೈಲೈಟ್ ಮಾಡುತ್ತಿದ್ದರು. ಈ ನಾಟಕೀಯ ಬೆಳವಣಿಗೆಗಳನ್ನೆಲ್ಲ (ಮಾರಿಷಸ್ ಟು ಸ್ಟಾರ್ ಹೋಟೆಲೊಳಗಿನ ಗುಪ್ತ ಮತದಾನದ ತನಕ) ನೋಡಿದರೆ ಸಿದ್ಧಾರ್ಥರ ವ್ಯಾಖ್ಯಾನವನ್ನು ತಳ್ಳಿಹಾಕುವಂತಿಲ್ಲ....
idu just siddharthana anasike ashte, vyakhyaana anta dodda pada beda idakke.....
ಹೆಗಡೆಯವರು ಹಿಂದೊಮ್ಮೆ ಅಡ್ವಾನಿಯವರ ಮಾತಿಗೆ ಬೆಲೆ ಕೊಟ್ಟು ರಾಜಿನಾಮೆ ಹಿಂತೆಗೆದುಕೊಂಡರು ಎಂಬ ಒಂದೇ ಆಧಾರದ ಮೇಲೆ ಬರೆದಂತಿದೆ ಈ ಲೇಖನ. ಹರಿಪ್ರಸಾದರಿಗಿರುವ ರಾಜಕೀಯ ಅಗತ್ಯಗಳು ಹೆಗಡೆಯವರಿಗೆ ಇದ್ದಂತಿಲ್ಲ. ಸುಮ್ಮನೆ ಹುಳುಕು ಹುಡುಕಬೇಡಿ. ಅಡ್ವಾಣಿಗಿರುವ ಸಮಸ್ಯೆ ಭ್ರಷ್ಟ ಯಡಿಯೂರಪ್ಪನವರನ್ನು ಇಟ್ಟುಕೊಂಡು ಕೇಂದ್ರ ಸರಕಾರದ ವಿರುದ್ಧ ಹೇಗೆ ಬಡಿದಾದುವುದು ಎಂಬುದು....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ