ಬುಧವಾರ, ಆಗಸ್ಟ್ 3, 2011

ಮಾರಿಷಸ್ ಮಳೆಯೂ, ಆಷಾಢ ಅಶುಭ ಮಾಸವೂ: ಸಿದ್ದಾರ್ಥ ವ್ಯಾಖ್ಯಾನ
ಸಿದ್ಧಾರ್ಥ
ಗುರುವಾರ, 28 ಜುಲೈ 2011 (01:03 IST)



ಮುಖ್ಯಮಂತ್ರಿ ಸ್ಥಾನದಲ್ಲಿ ಮೂರು ವರ್ಷಗಳ ಕಾಲ ಅವಿರತ ದುಡಿದು ಯಡಿಯೂರಪ್ಪನವರು ಇದೇ ಜುಲೈ ೧೯ ರಂದು ಮಕ್ಕಳು, ಮೊಮ್ಮಕ್ಕಳೊಂದಿಗೆ ಮಾರಿಷಸ್ ನೆಲದಲ್ಲಿ ರಜೆಯ ಮಜೆ ಅನುಭವಿಸಲು ಕಾಲಿಟ್ಟಾಗ, ಪ್ರಾಯಶಃ ತಮ್ಮ ಈ ರಜೆ ಮುಂದಿನ ದಿನಗಳಲ್ಲಿ ಅತ್ಯಂತ ದುಬಾರಿಯಾಗಿ ಪರಿಣಮಿಸಲಿದೆ ಎಂಬ ಸುಳಿವಿನ ಮುನ್ಸೂಚನೆ ಅವರಿಗೆ ಇರಲಿಕ್ಕಿಲ್ಲ.

ಕೇವಲ ೫ ದಿನಗಳ ಅವಧಿಯಲ್ಲಿ ಮುಖ್ಯಮಂತ್ರಿಯ ಗೈರು ಹಾಜರಿಯಲ್ಲಿ ಏನೆಲ್ಲಾ ನಡೆಯಿತು? ಯಾವ ಪಕ್ಷದ ಯಾವ ನಾಯಕರು ಮುಖ್ಯಮಂತ್ರಿಯ ಈ ರಜೆಗೆ ಹೇಗೆ ಪ್ರತಿಕ್ರಿಯಿಸಿದ್ದರು? ಅವರ ಪಕ್ಷದ ನಾಯಕರು ಯಡಿಯೂರಪ್ಪನವರ ವಿರುದ್ಧ ಲೋಕಾಯುಕ್ತ ವರದಿ ಎಂಬ ಕತ್ತಿಯನ್ನು ಹೇಗೆ ಸಾಪು ಮಾಡಿಕೊಳ್ಳುತ್ತಾ ಹೋದರು? ಇವೆಲ್ಲವನ್ನು ಈಗಾಗಲೇ ದಿನ ಪತ್ರಿಕೆಗಳು, ಟಿವಿ ಮಾಧ್ಯಮಗಳು ಬಿಚ್ಚಿಡುತ್ತಲೇ ಬಂದಿವೆ. ಇದೊಂದು ಮಹಾಭಾರತವೇ ಸೈ.

ನಾವು ಭಾರತೀಯರು ಅಧಿಕಾರ ಸ್ಥಾನದಲ್ಲಿರುವವರೂ ಮನುಷ್ಯರೇ. ಅವರಿಗೂ ಖಾಸಗಿ ಬದುಕಿದೆ. ಅವರಿಗೂ ಮಾನವ ಸಹಜ ಆಸೆ ಆಕಾಂಕ್ಷೆಗಳಿವೆ. ಅವರಿಗೂ ದಣಿವು ಆಯಾಸಗಳು ಉಂಟಾಗುತ್ತವೆ. ನಮ್ಮೆಲ್ಲರಂತೆಯೇ ಅವರಿಗೂ ಮನರಂಜನೆಯ ಅಗತ್ಯವಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುವುದೇ ಇಲ್ಲ. ಇಲ್ಲವಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಕುಟುಂಬದ ಸದಸ್ಯರೊಂದಿಗೆ ಮಂತ್ರಿ ಮಾಲ್‌ನಲ್ಲಿ ಚಲನಚಿತ್ರ ವೀಕ್ಷಿಸಿದರು; ಮತ್ತ್ತೊಬ್ಬ ನಾಯಕರು ವಿದ್ಯಾರ್ಥಿ ಭವನದಲ್ಲಿ ಕುಳಿತು ಮಸಾಲೆ ದೋಸೆ ತಿಂದರು. ಇತ್ಯಾದಿ ಪ್ರಕಟಣೆಗಳು ಪತ್ರಿಕೆಗಳ ಮುಖಪುಟದಲ್ಲಿ ಟಿವಿ ಚಾನೆಲ್‌ಗಳ ಪ್ರೈಂ ನ್ಯೂಸ್‌ಗಳಲ್ಲಿ ಕಾಣಿಸಿಕೊಳ್ಳುವ ಅಗತ್ಯವಿರುತ್ತಿರಲಿಲ್ಲ.

ಇಷ್ಟಾಗಿ ಅಧಿಕಾರ ಸ್ಥಾನ ಹೊಂದಿರುವವರು ಆಗಾಗ್ಗೆ ರಜೆ ಪಡೆಯುವುದು ಅಪರಾಧವೇನಲ್ಲ. ಸ್ವಚ್ಚಂದ ಪ್ರಜಾಸತ್ತೆಗೆ ಮಾದರಿಯಾಗುವ ಅಮೆರಿಕಾ ಇರಲಿ, ಕಬ್ಬಿಣ ತೆರೆಯೊಳಗೆ ಬಚ್ಚಿಟ್ಟುಕೊಂಡಿರುವ ಚೀನಾವಿರಲಿ, ಅಧಿಕಾರ ಸ್ಥಾನದಲ್ಲಿರುವವರು ಆಗಿಂದಾಗ್ಗೆ ರಜೆಯ ಮೇಲೆ ತೆರಳುವುದು ಸರ್ವೇ ಸಾಮಾನ್ಯ. ಒಮ್ಮೆ ರಾಜಕಾರಣಕ್ಕೆ ಕಾಲಿರಿಸಿದರೆ ಸಾಯುವ ತನಕ ನಿವೃತ್ತಿಯೇ ಇಲ್ಲದಂತೆ ಅಧಿಕಾರವನ್ನು ಅನುಭವಿಸುತ್ತೇವೆಂಬ ಸ್ವಯಂ ಘೋಷಿತ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿರುವ ಭಾರತ ರಾಜಕಾರಣದಲ್ಲಿ ಮಾತ್ರ ರಜೆ, ವಿಹಾರ ಪ್ರವಾಸ, ಸ್ವಯಂ ನಿವೃತ್ತಿ ಇತ್ಯಾದಿ ಪದಗಳೇ ಅಪರಿಚಿತವಾಗಿರುತ್ತದೆ.

ಇಂತಹ ಸನ್ನಿವೇಶದಲ್ಲಿಯೂ ತಮ್ಮ ವೈಯಕ್ತಿಕ ಜೀವನವನ್ನು ರಾಜಕಾರಣದಿಂದ ಪ್ರತ್ಯೇಕವಾಗಿಟ್ಟುಕೊಂಡು ಖಾಸಗಿ ಕಾರಣಗಳಿಗಾಗಿ ರಜೆಯ ಮೇಲೆ ಹೋಗುತ್ತಿದ್ದ ರಾಜಕಾರಣಿಗಳು ಇಲ್ಲವೇ ಇಲ್ಲ. ರಾಷ್ಟ್ರಪತಿ ಡಾ: ಎಸ್.ರಾಧಾಕೃಷ್ಣನ್ ಅಧಿಕಾರದಲ್ಲಿದ್ದಾಗಲೂ ವಿದೇಶಗಳಿಗೆ ಅಧ್ಯಯನ ಪ್ರವಾಸ ಕೈಗೊಂಡರೆ ಪ್ರಧಾನಿ ಜವಹರಲಾಲ್ ನೆಹರುರವರಂತೂ ವಾರಕ್ಕೊಂದು ದಿನ ಕಡ್ಡಾಯವಾಗಿ ಸಾರ್ವಜನಿಕ ಸಂಪರ್ಕಗಳಿಂದ ಕಛೇರಿ ವಿದ್ಯಮಾನಗಳಿಂದ ದೂರ ಉಳಿಯುತ್ತಿದ್ದರು. ಇದೇ ಪರಿಪಾಠವನ್ನು ಅವರ ಪುತ್ರಿ ಇಂದಿರಾ ಗಾಂಧಿ ಪಾಲಿಸಿಕೊಂಡು ಬಂದಿದ್ದರು, ರಾಜೀವ್ ಗಾಂಧಿಯವರಂತೂ ಪ್ರತಿ ವಾರಾಂತ್ಯ ಹೆಂಡತಿ ಮಕ್ಕಳೊಂದಿಗೆ, ಡೂನ್ ಶಾಲೆಯ ಗೆಳೆಯರೊಂದಿಗೆ ಕಾಡು ಸುತ್ತುತ್ತಿದ್ದರು. ರಾಜೀವ್ ಸಾವಿನ ನಂತರವೂ ಸೋನಿಯಾ ಕುಟುಂಬದ ಸದಸ್ಯರೊಂದಿಗೆ ವರ್ಷಾಂತ್ಯ ವಿಹಾರ ಪ್ರವಾಸ ಹೋಗುವುದನ್ನು ಮುಂದುವರಿಸಿಯೇ ಇದ್ದಾರೆ.

ಸಮಾಜವಾದಿ ಧುರೀಣ ಮಧುಲಿಮಯೆ, ಬಿಜೆಪಿಯ ನಾನಾಜಿ ದೇಶಮುಖ್, ಮಾರ್ಕ್ಷಿಸ್ಟ್ ಪಕ್ಷದ ಜ್ಯೋತಿ ಬಸು ಬೇಡಿಕೆ ಇರುವಾಗಲೇ ವಯೋ ನಿವೃತ್ತಿ ಪಡೆದರು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಲವು ಬಾರಿ ರಜೆಯ ಮೇಲೆ ತೆರಳಿದ್ದರು. ಎರ್ಕಾಡ್, ಊಟಿ, ಕೊಡಗು ಅವರ ನೆಚ್ಚಿನ ವಿಹಾರ ತಾಣಗಳಾಗಿದ್ದವು. ಈ ರಾಜ್ಯ ಕಂಡ ಪ್ರತಿಭಾನ್ವಿತ ಮುಖ್ಯಮಂತ್ರಿ ಎನಿಸಿಕೊಂಡ ಕೇಂದ್ರ ಸಚಿವ ಎಸ್.ಎಂ. ಕೃಷ್ಣ ಮೊನ್ನೆಯಷ್ಟೆ ರಾಜಕಾರಣಿಗಳಿಗೂ ಕೂಡ ಕಡ್ಡಾಯ ನಿವೃತಿಯ ಅಗತ್ಯ ಇದ್ದೇ ಇದೆ ಎಂದು ಪ್ರತಿಪಾದಿಸಿದ್ದರು.

ಪರಿಸ್ಥಿತಿ ಹೀಗಿರುವಾಗ ಕರ್ನಾಟಕ ಸರ್ಕಾರದ ಘನ ಮುಖ್ಯಮಂತ್ರಿ ಯಡಿಯೂರಪ್ಪನವರು ಏಕಾಏಕಿ ಸ್ವಯಂ ರಜೆ ಘೋಷಿಸಿಕೊಂಡು ಮಕ್ಕಳು, ಮೊಮ್ಮಕ್ಕಳೊಂದಿಗೆ ವಿಹಾರ ಪ್ರವಾಸ ಹೊರಟಾಗ ನಾಡಿನ ಜನತೆ ಸ್ವಾಗತಿಸಬೇಕಿತ್ತು. ಎಲ್ಲದನ್ನೂ ಬ್ರೇಕಿಂಗ್ ನ್ಯೂಸ್ ಮಾಡುವ ನಮ್ಮ ಸುದ್ದಿ ಮಾದ್ಯಮಗಳೇಕೆ ಯಡಿಯೂರಪ್ಪನವರ ಪ್ರವಾಸಕ್ಕೆ ಮೊದಲೇ ಮಾರಿಷಸ್‌ಗೆ ವರದಿಗಾರರ ದಂಡನ್ನು ಕಳಿಸಿ ನೇರ ಪ್ರಸಾರ ಮಾಡುವ ಕೃಪೆ ಮಾಡಲಿಲ್ಲವೆಂಬುದು ತಿಳಿಯದಾಗಿದೆ. ಮಂಜುನಾಥನ ಮೇಲೆ ಆಣೆ ಮಾಡುವ ಮಾತನಾಡಿ ಕಳೆದುಕೊಂಡಿದ್ದ ಮಾನವನ್ನು ಒಪ್ಪತ್ತಿನಲ್ಲಿ ಮುಕ್ತಾಯಗೊಂಡ ಕುಮಾರಸ್ವಾಮಿ ಆಮರಣ ಉಪವಾಸ ಮುಷ್ಕರದ ಮೂಲಕ ಮರಳಿ ಗಿಟ್ಟಿಸಿಕೊಂಡು ಮುಖ್ಯಮಂತ್ರಿ ದಿಢೀರ್ ವಿಹಾರ ರಜೆಯ ಮೇಲೆ ಹೋಗುವ ಮಾತನಾಡಿದಾಗ ಅದನ್ನು ಶಂಕಿಸುವ ಮನೋಭಾವ ಮೀಡಿಯಾದ ಮಿತ್ರರಿಗೆ ಯಾರಿಗೂ ಇದ್ದಂತೆ ಕಾಣಲಿಲ್ಲ. ಪ್ರವಾಸ ಕಾರ್ಯಕ್ರಮ ಕೂಡ ಎಲ್ಲೋ ಒಂದು ಸಣ್ಣ ತುಣುಕಾಗಿ ಕಾಣಿಸಿಕೊಂಡಿತ್ತಷ್ಟೆ.

ಲೋಕಾಯುಕ್ತ ವರದಿಯ ಹಲವು ಮುಖ್ಯಾಂಶಗಳು ಮಂಡನೆಗೆ ಮೊದಲೇ ಪತ್ರಿಕೆಗಳಲ್ಲಿ ಬೆಳಕು ಕಂಡಾಗ ಮಾತ್ರ ಮುಖ್ಯಮಂತ್ರಿಯ ವಿಹಾರ ಪ್ರವಾಸ ಎಲ್ಲಿಲ್ಲದ ನಿಗೂಢತೆಯನ್ನು ಪಡೆದುಕೊಳ್ಳಲಾರಂಭಿಸಿತು.

ನಾವು ಮೊದಲು ಗಮನಿಸಬೇಕಾದ್ದು ಯಡಿಯೂರಪ್ಪನವರು ಪ್ರವಾಸಕ್ಕೆ ಆಯ್ಕೆ ಮಾಡಿಕೊಂಡ ಟೈಮಿಂಗ್. ಅವರು ಆರಿಸಿಕೊಂಡ ಮಾರಿಷಿಸ್‌ನಲ್ಲಿ ಈಗ ಹೇಳಿ ಕೇಳಿ ತೀವ್ರ ಮಳೆಗಾಲ. ಬಿಟ್ಟು ಬಿಡದೇ ಬಿರುಸಾಗಿ ದಿನವಿಡೀ ಸುರಿಯುವ ಮಳೆಗಾಲ. ನಾನು ನೆಟ್ ಮೂಲಕ ಕಂಡುಕೊಂಡದ್ದು ಮಾರಿಷಸ್‌ನಲ್ಲಿ ಯಡಿಯೂರಪ್ಪ ತಂಗಿದ್ದ ಆರು ದಿನಗಳ ಪೈಕಿ ನಾಲ್ಕೂವರೆ ದಿನ ಮಳೆ ಸುರಿಯಿತು. ಇತ್ತೀಚಿನ ದಿನಗಳಲ್ಲಿ ವಿಶ್ವ ಪ್ರವಾಸೋದ್ಯಮದ ಪ್ರಮುಖ ತಾಣ ಎನಿಸಿಕೊಂಡಿರುವ ಮಾರಿಷಸ್‌ನಲ್ಲಿ ಈ ಅವಧಿಯಲ್ಲಿ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ಸಂಖ್ಯೆ ಅತೀ ಕಡಿಮೆಯಂತೆ.

ಎರಡನೇಯದಾಗಿ ಯಡಿಯೂರಪ್ಪ ಹೊರಟ್ಟಿದ್ದು ಮಧುಚಂದ್ರ ಪ್ರವಾಸವಂತೂ ಅಲ್ಲ. ಅವರೊಟ್ಟಿಗೆ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ನಡೆಸುತ್ತಿರುವ ಮೊಮ್ಮಕ್ಕಳೂ ಇದ್ದರು. ಜೂನ್ ತಿಂಗಳಿನಲ್ಲಿ ತರಗತಿಗಳು ಆರಂಭವಾದರೆ ಜುಲೈ-ಆಗಸ್ಟ್ ತಿಂಗಳುಗಳು ಅಧ್ಯಯನದ ಏರು ಕಾಲ (Peak Time) ಎನ್ನಬಹುದು. ಭರಾಟೆಯ ಪಾಠ ಪ್ರವಚನಗಳು ನಡೆಯುತ್ತಿರುವಾಗ ತರಗತಿಗಳಿಗೆ ಬಂಕ್ ಹೊಡೆದು ತಾತನ ರಜೆಯ ಮಜೆಯಲ್ಲಿ ಭಾಗಿಗಳಾಗಲು ಆ ಮೊಮ್ಮಕ್ಕಳು ಒಪ್ಪಿಕೊಂಡಿದ್ದಾದರೂ ಹೇಗೆ ಎಂಬ ಪ್ರಶ್ನೆ ಬಾರದೆ ಇರದು.

ಮೂರನೇಯದಾಗಿ ಆಷಾಢ ಅಶುಭ ಮಾಸವೆಂದು ಪರಿಗಣಿಸಲಾದರೂ ಹಿಂದು ಕುಟುಂಬಗಳಲ್ಲಿ ಆಷಾಢದ ಪ್ರತಿ ದಿನವೂ ಒಂದಲಾ ಒಂದು ನೆಪದಲ್ಲಿ ಪೂಜೆಗೆ ಪ್ರಶಸ್ತ್ಯವಾದುದು. ಯಡಿಯೂರಪ್ಪನಂತಹ ದೈವಭೀರು ಕುಟುಂಬದ ಯಜಮಾನನಾಗಿರುವಾಗ ಆ ಮನೆಯ ಹೆಣ್ಣು ಮಕ್ಕಳು ಪೂಜೆ ಪುನಸ್ಕಾರಗಳಲ್ಲಿ ತೊಡಗುವುದನ್ನು ಬಿಟ್ಟು ರಜೆಯ ಮಜೆ ಅನುಭವಿಸಲು ಹೊರಟಾರೆಯೇ.

ಯಡಿಯೂರಪ್ಪನವರು ತಮ್ಮ ಪ್ರವಾಸಕ್ಕೆ ಮಾರಿಷಸ್ ಅನ್ನೇ ಯಾಕೆ ಆಯ್ಕೆ ಮಾಡಿಕೊಂಡರು? ಆಷಾಢದಲ್ಲಿಯೇ ಪ್ರವಾಸ ಹೊರಟಿದ್ದು ಜ್ಯೋತಿಷ್ಯರ ಸಲಹೆ ಮೇರೆಯೇ? ತಮ್ಮ ಹಿಂದಿನ ಆಪ್ತ ಬಳಗವನ್ನು ಇಲ್ಲಿಯೇ ಬಿಟ್ಟು ಹೇಗೆ ಹೊರಟರು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಕೂರದೆ ಮುಂದುವರೆಯುತ್ತೇನೆ.

ಮೊದಲು ಹೇಳಿದಂತೆ ವಿಹಾರದ ರಜೆ ಪಡೆಯುವುದು ಯಾವುದೇ ಅಧಿಕಾರಸ್ಥ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಹಕ್ಕು, ಯಡಿಯೂರಪ್ಪ ಕೂಡಾ ಬಿಡುವಿಲ್ಲದ ಅಭಿವೃದ್ದಿ ರಾಜಕಾರಣದಿಂದ ದಣಿದು ವಿರಾಮಕ್ಕಾಗಿ ಪ್ರವಾಸ ಹೋಗುತ್ತಿರುವುದಾಗಿ ಹೇಳಿದ್ದರೆ ಯಾರು ಅದನ್ನು ಆಕ್ಷೇಪಿಸುತ್ತಿರುವಂತಿರಲಿಲ್ಲ. ಆದರೆ ಯಡಿಯೂರಪ್ಪ ವಿಮಾನ ಹತ್ತುವ ಮುನ್ನ ಹೇಳಿದ್ದೇನು? ತಾವು ಮಾರಿಷಸ್‌ನಲ್ಲಿ ಆಗಿರುವ ಅಭಿವೃದ್ದಿಯ ಸ್ಪಷ್ಟ ಚಿತ್ರಣ ಪಡೆಯಲು ಅಲ್ಲಿಗೆ ಹೋಗುತ್ತಿರುವುದಾಗಿ ಅಲ್ಲಿನ ಅಭಿವೃದ್ದಿಯನ್ನು ಇಲ್ಲಿಗೆ ಅಳವಡಿಸಿಕೊಳ್ಳುವುದಾಗಿ ಹೇಳಿದ್ದರು.

ಯಡಿಯೂರಪ್ಪನವರ ಪ್ರಾಮಾಣಿಕತೆಯ ಮೇಲೆ ಸಂಶಯ ಬರಲಾರಂಬಿಸಿದ್ದು ಇಲ್ಲಿಯೇ. ಪ್ರಾಯಶಃ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತೀ ವರ್ಷಧಾರೆ, ಮತ್ತೊಂದೆಡೆ ಪ್ರವಾಹ ಪ್ರಕೋಪವಿರುವಾಗ ಮುಖ್ಯಮಂತ್ರಿ ವಿಹಾರ ಹೊರಟಿದ್ದಾರೆ ಎಂದು ಸಾರ್ವಜನಿಕರು ಆಕ್ಷೇಪಿಸಿಯಾರು ಎಂಬ ಶಂಕೆಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅಭಿವೃದ್ದಿಯ ನೆಪ ಒಡ್ಡಿದ್ದರೆ? ಹಾಗೆ ಹೇಳುವಂತೆ ಅವರ ಆಪ್ತ ಸಲಹೆಗಾರರು ಹೇಳಿಕೊಟ್ಟರೇ? (ಮಂಜುನಾಥನ ಮೇಲಾಣೆ ಎದುರಿಸುವ ಸವಾಲನ್ನು ಹೇಳಿಕೊಟ್ಟ ಸಲಹೆಗಾರರರೇ ಪ್ರಾಯಶಃ ಈ ಸಲಹೆಯನ್ನು ನೀಡಿದ್ದಿರಬೇಕು.)

ರಾಜಕಾರಣಿಯಾಗಿ ಯಡಿಯೂರಪ್ಪ ಹಲವಾರು ವಿದೇಶಗಳಿಗೆ ಹಲವಾರು ಬಾರಿ ಭೇಟಿ ನೀಡಿದ್ದಾರೆ. ತಂಡ ಪ್ರವಾಸದಲ್ಲಿಯಂತೂ (Team Tours) ಯಡಿಯೂರಪ್ಪ ಎಲ್ಲರ ಅಚ್ಚುಮೆಚ್ಚು. ಉಪಮುಖ್ಯಮಂತ್ರಿಯಾಗಿಯೂ ಮಲೇಶಿಯಾ, ಇಂಗ್ಲೇಡ್, ಸಿಂಗಾಪುರಗಳಿಗೆ ಭೇಟಿ ನೀಡಿದ್ದರು. ಮುಖ್ಯಮಂತ್ರಿಯಾಗಿ ಅಮೆರಿಕಾ, ಚೀನಾ, ಬಹ್ರನ್, ದುಬೈಗಳಿಗೂ ಭೇಟಿ ನೀಡಿದ್ದರು. ಅಭಿವೃದ್ದಿಯ ಅಧ್ಯಯನದ ಏಕೈಕ ಉದ್ದೇಶವನ್ನೇ ಅಂದು ಹೇಳಿದ್ದ ಯಡಿಯೂರಪ್ಪ ಅಲ್ಲಿ ಕಲಿತ ಏನೆಲ್ಲಾ ಯೋಜನೆಗಳನ್ನು ಇಲ್ಲಿ ಏನು ಅನುಷ್ಠಾಗೊಳಿಸಿದರೂ ಎಂದು ಕೇಳುವುದು ಪ್ರತಿ ಪ್ರಜೆಯ ಅಗತ್ಯವಾದೀತು.

ಈ ಲೇಖನ ಬರೆದು ಮುಗಿಸುವ ವೇಳೆಗೆ ಯಡಿಯೂರಪ್ಪನವರು ಅಧಿಕಾರದಿಂದ ನಿರ್ಗಮಿಸುವುದು ಖಚಿತವಾಗಿದೆ. ಹೋರಾಟ ಸ್ವಭಾವದ ಜನಪರ ಚಳುವಳಿಯಲ್ಲಿಯೇ ರೂಪುಗೊಂಡ ವ್ಯಕ್ತಿಯೊಬ್ಬರು ಗದ್ದುಗೆ ಏರಿದ ನಂತರ ಕೈಗೆ ಸಿಕ್ಕ ಸುವರ್ಣ ಅವಕಾಶ ಕಳೆದುಕೊಂಡು, ಕೇವಲ ಸ್ವಂತ ಆಸ್ತಿ ವೃದ್ಧಿಸಿಕೊಳ್ಳಲಷ್ಟೆ ಅಧಿಕಾರವನ್ನು ಬಳಸಿಕೊಂಡರು. ಇಂತಹ ಮುಖ್ಯಮಂತ್ರಿ ಕರ್ನಾಟಕದ ಇತಿಹಾಸದಲ್ಲಿ ಬೇರೊಬ್ಬರಿಲ್ಲ.

ಪುಟದ ಮೊದಲಿಗೆ



Votes: 1 Rating: 5
ನಿಮ್ಮಪ್ರತಿಕ್ರಿಯೆ
Uppu thinda mele neeru kuudiyalebeku!...
Guest | 29 Jul 2011 09:11 pm | Reply »
Re: ಉಪ್ಪನ್ನ ಯಾರಿಗೋ ತಿನ್ನಿಸ್ತಿದ್ದಾರೆ ಹಾಗೆ ನೀರನ್ನೂ ನಮಗೆಲ್ಲ ಕುಡಿಸ್ತಿದ್ದಾರೆ ಈ ಪ್ರಭ್ರತಿಗಳು
Guest | 30 Jul 2011 10:49 am
ಇಂದಿನ ರಾಜಕೀಯದ ಮತ್ತು ರಾಜಕಾರಣದ ಜಾಡು ಹಿಡಿಯುವುದೇ ಕಷ್ಟ,! ತಮ್ಮ ವಿಶ್ಲೇಷಣೆ ನಿಜವಿದ್ದೀತು. - ಪೆಜತ್ತಾಯ ಎಸ್. ಎಮ್....
Guest | 29 Jul 2011 02:11 pm | Reply »
ರಾಮನಿಂದ ಹತನಾದ ರಾವಣನ ಮಾವ ಮಾರೀಚ ಹತನಾಗಿ ಬಿದ್ದ ಸ್ಥಳವಂತೆ ಅದು. ನೆನಪು ಕಾಡಿರಬೇಕು ಪಾಪ......
Guest | 29 Jul 2011 02:11 pm | Reply »
ತೊಂದ್ರೆಯಿಲ್ಲ, ನಾಡಿದ್ದಿನಿಂದ ಪರ್ಮನೆಂಟಾಗಿ ಮಾರಿಷಸ್ ನಲ್ಲೇ ಸೈಟು ತಗೊಂಡು ಝಂಡಾ ಊರಲಡ್ಡಿಯಿಲ್ಲ ಆದರೆ ಹಳೆಚಾಳಿ ಮುಂದುವರೆಸಿದರೆ ಮಾತ್ರ ಕಷ್ಟ...
Guest | 29 Jul 2011 02:08 pm | Reply »
marishas yake?kappu hana bharatakke taralu marishas dari anta ondu vishaya ide.adakke....
Guest | 29 Jul 2011 01:46 pm | Reply »
Re: ಕಪ್ಪು ಹಣ..!!? ನಮ್ಮ ನಾಡಿನ ಕಪ್ಪು ಚಿನ್ನ (ಕಬ್ಬಿಣದದಿರು) ವನ್ನ ಅಕ್ರಮವಾಗಿ ಮಾರಿ ಸಂಪಾದಿಸಿದ ಈ ಸೋಕಾಲ್ಡ್ ದೇಶಭಕ್ತರ ಬೇನಾಮಿ ಸಂಪತ್ತೇ ನಮ್ಮನ್ನುದ್ಧರಿಸಲು ಸಾಕು
Guest | 30 Jul 2011 10:51 am
ಇಲ್ಲಿ ಯಡಿಯೂರಪ್ಪರವರ ರಾಜೀನಾಮೆ ವಿಷಯಕ್ಕಿಂತ ಮುಖ್ಯವಾಗಿ ನಮ್ಮ ಸಂಪಾದಕರಿಗೆ ಈ ಸುದ್ದಿ ಅಷ್ಟೊಂದು ಕುತೂಹಲ ಕೆಳರಿಸಿರುವುದು ನಿಜಕ್ಕೂ ಮಜವೆನಿಸುತ್ತಿದೆ. ಕೆಂಡಸಂಪಿಗೆಯ ಹೊಸ ಲೇಖನಕ್ಕೆ ಹಪಹಪಿಸುತ್ತಿರುವ ನನಗೆ(ಜನರಿಗೂ) ದಿನವೂ ಮದ್ಯಾಹ್ನದ ೩ ಘಂಟೆಯ ನಂತರವೇ ನೈವೆಧ್ಯ. ಅಷ್ಟು ಹೊತ್ತಿಗಾಗಲೇ ಕೆಲಸದ ಗಡಿಬಿಡಿಯಲ್ಲಿ ಓದುವುದಕ್ಕೆ ಸಮಯವೂ ಕಡಿಮೆಯೇ. ಆದರೆ ಈ ಯಡಿಯೂರಪ್ಪರವರ ವಿಷಯ ಪ್ರಕಟಿಸುವುದಕ್ಕೆ ಬೆಳಿಗ್ಗೆಯೇ ಏನು ಖುಷಿ ಕಂಡಿತೋ ನಾ ಕಾಣೆ-ವಿನಯ್ ಹೆಗ್ಡೆ....
Guest | 29 Jul 2011 01:37 pm | Reply »
ವಿಚಾರ ಲಹರಿಯೇನೋ ಒಪ್ಪುವಂತಿದೆ. ಆದರೆ ವಿಹಾರ, ಪ್ರವಾಸಗಳು ಯಾವ ಸಂದರ್ಭದಲ್ಲಿ ಕೈಗೊಳ್ಳುವಂಥವು ಎಂಬ ಕನಿಷ್ಠ ಪ್ರಜ್ಞೆಯಾದರೂ ಮುಖ್ಯಮಂತ್ರಿಯಂತಹ ಸ್ಥಾನದಲ್ಲಿರುವವರಿಗೆ ಅತ್ಯವಶ್ಯ ಎಂಬುದು ವಾದಾತೀತ. ಮುಖ್ಯಮಂತ್ರಿಯವರು ಮಾರಿಷಸ್‌ಗೆ ಹೊರಟ ದಿನ ಪಿ.ಮಹಮದ್ ಅವರು ಪ್ರಜಾವಾಣಿಯಲ್ಲಿ ಬರೆದ ವ್ಯಂಗ್ಯಚಿತ್ರ ಈ ಕುರಿತು ಗಮನಿಸಲೇಬೇಕಾದ ಕಾಲಸಾಕ್ಷ್ಯ. ಸಿಎಂ ಯಡಿಯೂರಪ್ಪನವರಿದ್ದ ವಿಮಾನ ಆಗಸದಲ್ಲಿ ಹೊರಟಾಗ ಉತ್ತರದ ನೆರೆಪೀಡಿತ ಪ್ರದೇಶದಲ್ಲಿ ಮುಳುಗಡೆಯಾದ ಮನೆಯೊಂದರ ಸೂರಿನ ಮೇಲೆ ನಿಂತ ಅಜ್ಜಿ ತನ್ನ ಮೊಮ್ಮೊಗುವಿಗೆ ಸೀಎಮ್ಮಜ್ಜನಿಗೆ ಟಾಟಾ ಮಾಡು.. ಎಂದು ಹೇಳುವ ಆ ಮಾರ್ಮಿಕ ಚಿತ್ರ ಈ ಲೇಖನದ ಆರಂಭದ ವಾದಸರಣಿಗೆ ಸೂಕ್ತ ಉತ್ತರವಾಗಿತ್ತು- ಪ್ರಾಯಶಃ ಈ ಲೇಖನ ಹುಟ್ಟುವ ಮೊದಲೇ! -ಸಹ್ಯಾದ್ರಿ ನಾಗರಾಜ್...
Guest | 29 Jul 2011 01:00 pm | Reply »

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ