ಬುಧವಾರ, ಆಗಸ್ಟ್ 3, 2011

My another article at Kendasampige.com

ನಾಲ್ಕು ಘಟನೆಗಳು:ನೂರು ಪ್ರಶ್ನೆಗಳು;ಸಿದ್ದಾರ್ಥ ಬರಹ
ಸಿದ್ಧಾರ್ಥ
ಮಂಗಳವಾರ, 26 ಜುಲೈ 2011 (04:15 IST)

ಘಟನೆ:-೧ ಇದು ನಡೆದದ್ದು ಕೊಯಮತ್ತೂರು ನಗರದಲ್ಲಿ, ಭಾನುವಾರ ಜುಲೈ ೧೦, ೨೦೧೧ರಂದು.

ಸ್ಥಳ ಒಂದು ಟ್ರಾಪಿಕ್ ನಿಲುಗಡೆ. ಹಾಡ ಹಗಲು. ಸಂತೋಷ್ ಹೆಸರಿನ ಯುವಕನೊಬ್ಬ ದ್ವಿ ಚಕ್ರ ವಾಹನದಲ್ಲಿ ಬರುತ್ತಿದ್ದಾನೆ. ರಸ್ತೆ ಬದಿಯಲ್ಲಿ ನಿಂತಿದ್ದ ಇಬ್ಬರು ಯುವಕರು ಅವನ ವಾಹನಕ್ಕೆ ಟಾಂಗು ಹೊಡೆದು ಬೀಳಿಸುತ್ತಾರೆ. ಇನ್ನಿಬ್ಬರು ಯುವಕರು ಅವರೊಂದಿಗೆ ಕೂಡಿಕೊಂಡು ಸಂತೋಷ್‌ನನ್ನು ಹೊಡೆಯಲಾರಂಬಿಸುತ್ತಾರೆ. ಅವರಲ್ಲಿ ಒಬ್ಬಾತ ದೊಡ್ಡದೊಂದು ಸೈಜುಗಲ್ಲನ್ನು ತಂದು ಸಂತೋಷನ ತಲೆಯ ಮೇಲೆ ಎತ್ತಿಹಾಕುತ್ತಾನೆ. ಅಲ್ಲಿಗೆ ಸಂತೋಷನ ಪ್ರಾಣ ಹಾರಿಹೋಗುತ್ತದೆ.

ಘಟನೆ-೨. ಬೆಂಗಳೂರಿನ ಜೆ.ಪಿ.ನಗರದಲ್ಲಿ ಇದೇ ಜುಲೈ ೧೨ ರಂದು ರಾತ್ರಿ ನಡೆದದ್ದು.

ಮೋಹನ ಎಂಬಾತ ಗೋಬಿ ಮಂಚೂರಿ ತಿನ್ನಲು ಇಂದಿರಾ ಗಾಂಧಿ ಸರ್ಕಲ್‌ನಲ್ಲಿರುವ ಕರಾವಳಿ ಹೆಸರಿನ ಹೋಟೆಲ್‌ಗೆ ಹೋಗುತ್ತಾನೆ. ಕಡಿಮೆ ಕೊಟ್ಟಿದ್ದಕ್ಕಾಗಿ ಆಕ್ಷೇಪಣೆ ತೆಗೆಯುತ್ತಾನೆ. ಸಿಟ್ಟಿಗೆದ್ದ ಹೋಟೆಲ್ ಮಾಲೀಕ ವೀರೇಶ್ ತನ್ನ ಇಬ್ಬರು ಕಾರ್ಮಿಕರಾದ ನವೀನ್ ಮತ್ತು ರಮೇಶರೊಂದಿಗೆ ದೊಣ್ಣೆ ಹಾಗೂ ಸಲಾಕೆಗಳೊಂದಿಗೆ ಮೋಹನನನ್ನು ಹೊಡೆಯುತ್ತಾರೆ. ಮೋಹನ ರಕ್ತದ ಮಡುವಿನಲ್ಲಿ ಬೀಳುತ್ತಾನೆ. ಅದೆಷ್ಟೋ ಹೊತ್ತಿನ ನಂತರ ಅಲ್ಲಿಗೆ ಆಗಮಿಸುವ ಹೊಯ್ಸಳ ಪೊಲೀಸರು ಮೋಹನನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸುತ್ತಾರೆ. ಅವನು ಅಪರಾತ್ರಿಯಲ್ಲಿ ಅಸುನೀಗುತ್ತಾನೆ.

ಘಟನೆ:-೩. ನಡೆದದ್ದು ರಾಮನಗರ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಡರಹಳ್ಳಿ ಮನೆಯೊಂದರಲ್ಲಿ.

ಕಳ್ಳರು ಒಂಟಿಮನೆಯ ಬಾಗಿಲು ಮುರಿದು ಒಳನುಗ್ಗಿ ಮನೆಯ ವಸ್ತುಗಳನ್ನು ಕದಿಯುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಅದೇ ಮನೆಯ ಹುಡುಗ ಸಮೀಪದ ಫಿಲೋಮಿನ ಶಾಲೆಯ ವಿದ್ಯಾರ್ಥಿ ೮ ವರ್ಷದ ಚೇತನ್ ಶಾಲೆ ಮುಗಿಸಿ ಮನೆಗೆ ವಾಪಸ್ಸಾಗುತ್ತಾನೆ. ಕಳ್ಳರ ಕಣ್ಣಿಗೆ ಬೀಳುತ್ತಾನೆ. ತಮ್ಮ ಕುಕೃತ್ಯಕ್ಕೆ ಸಾಕ್ಷಿಯಾಗಿ ನಿಲ್ಲಬಲ್ಲ ಮುಗ್ಧ ಬಾಲಕನ ಕುತ್ತಿಗೆ ಹಿಸುಕಿ ಸಾಯಿಸುವ ನಿರ್ದಯಿ ಕೃತ್ಯದಲ್ಲಿ ಕಳ್ಳರು ಯಶಸ್ವಿಯಾಗುತ್ತಾರೆ. ಪೋಷಕರು ಮನೆಗೆ ಹಿಂತಿರುಗಿದಾಗ ಕಂಡದ್ದು ಬರಿದಾದ ಮನೆ, ಜೀವಕಳೆದುಕೊಂಡ ಬಾಲಕ.

ಘಟನೆ:-೪. ಜಾರ್ಕಂಡ್ ಮೂಲದ ಯಾಗೇಶ್ ಮಂಡಲ್ ೨೦ ವರ್ಷದ ಯುವಕ ಬೆಂಗಳೂರಿನ ಹೆಚ್.ಎಸ್.ಆರ್. ಬಡಾವಣೆಯ ಮನೆಯೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾನೆ. ಸ್ವಗ್ರಾಮದಲ್ಲಿರುವ ಪೋಷಕರಿಗೆ ಹಣ ಕಳುಹಿಸಲು ಇದೇ ಬಡಾವಣೆಯಲ್ಲಿರುವ ಎಸ್.ಬಿ.ಐ. ಬ್ಯಾಂಕಿಗೆ ಬರುತ್ತಾನೆ. ಹಣ ತುಂಬುವ ಚಲನ್ ಬರೆಯುತ್ತಿದ್ದಂತೆಯೇ ಇಬ್ಬರು ಆಗಂತುಕರು ಬಂದು ಪೆನ್ನು ಕೇಳುತ್ತಾರೆ. ತರುವಾಯ ಮತ್ತೊಬ್ಬ ಬಂದು ಕರ ವಸ್ತ್ರದಿಂದ ಮರೆಮಾಡಿದ ಕರೆನ್ಸಿ ನೋಟುಗಳ ಬಂಡಲೊಂದನ್ನು ಅವನ ಕೈಗಿತ್ತು ತುರ್ತು ಕರೆ ಮಾಡುವ ನೆಪದಲ್ಲಿ ಅವನ ಮೊಬೈಲ್ ಪಡೆದು ಹೊರ ಹೋಗುತ್ತಾನೆ. ಬಹಳ ಹೊತ್ತಾದರೂ ಅವರುಗಳು ಮರಳಿಬರದೇ ಇದ್ದಾಗ ಕೈಯಲ್ಲಿರುವ ಕರವಸ್ತ್ರದ ಗಂಟನ್ನು ಬಿಚ್ಚಿನೋಡಿದಾಗ ಅದರಲ್ಲಿ ಕಾಗದದ ತುಂಡುಗಳು ಹೊರ ಬೀಳುತ್ತವೆ. ಹೀಗೆ ವಂಚನೆ ಜಾಲಕ್ಕೆ ಸಿಲುಕಿ ಅಮಾಯಕ ಅಡುಗೆಯವನು ತನ್ನಲ್ಲಿದ ೮ ಸಾವಿರ ನಗದು ಹಾಗೂ ಮೊಬೈಲನ್ನು ಕಳೆದುಕೊಳ್ಳುತ್ತಾನೆ. ದಿಗ್ಭ್ರಾಂತನಾಗಿ ಬ್ಯಾಂಕಿನ ಅಧಿಕಾರಿಗಳನ್ನು ಸಂಪರ್ಕಿಸುತ್ತಾನೆ. ಬ್ಯಾಂಕಿನ ಆವರಣದ ವಿದ್ಯಮಾನಗಳನ್ನು ಚಿತ್ರೀಕರಿಸಿಕೊಳ್ಳುವ ಸಿಸಿ ಟಿವಿ ವ್ಯವಸ್ಥೆ ಕೆಟ್ಟುಹೋಗಿ ತುಂಬಾ ದಿನಗಳಾಗಿವೆ ಎಂಬ ಉತ್ತರ ಬರುತ್ತದೆ. ಕಡೆಗೆ ದೂರು ಸಲ್ಲಿಸಲು ಸಮೀಪದ ಹೆಚ್.ಎಸ್.ಆರ್ ಬಡಾವಣೆಯ ಪೊಲೀಸ್ ಠಾಣೆಗೆ ಹೋಗುತ್ತಾನೆ. ಅಲ್ಲಿನ ಪೊಲೀಸ್ ಅಧಿಕಾರಿಗಳು ಕನ್ನಡ ಬಾರದ ಇವನ ಮಾತನ್ನು ಕೇಳಲು ಸಿದ್ಧರಿಲ್ಲ. ಕನ್ನಡದಲ್ಲಿ ದೂರು ಬರೆದುಕೊಟ್ಟರೆ ಮಾತ್ರ ದಾಖಲು ಮಾಡಿಕೊಳ್ಳುವುದಾಗಿ ಹೇಳಿ ಅವನ ಅಹವಾಲು ಕೇಳಲು ನಿರಾಕರಿಸುತ್ತಾರೆ.

ಈ ನಾಲ್ಕು ಘಟನೆಗಳು ಇದೇ ತಿಂಗಳಲ್ಲಿ ರಾಜ್ಯದ ದಿನ ಪತ್ರಿಕೆಗಳಲ್ಲಿ ಪ್ರತ್ಯೇಕವಾಗಿ ಪ್ರತ್ಯೇಕ ದಿನಗಳಲ್ಲಿ ಪ್ರಕಟಿತಗೊಂಡ ಸುದ್ದಿಯ ತುಣುಕುಗಳು.

ಈಗ ಮತ್ತೆ ಘಟನೆಗಳಿಗೆ ಹಿಂತಿರುಗೋಣ.

ಘಟನೆ ೧ರಲ್ಲಿ ಸಂತೋಷನೆಂಬ ಮೋಟಾರು ಸವಾರನ ಕೊಲೆಯಾಗುತ್ತಿರುವಾಗ ಆ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಡಿಮೆ ಎಂದರೂ ೩೦೦ ಮಂದಿ ದ್ವಿಚಕ್ರ ವಾಹನ ಹಾಗೂ ಕಾರು ಚಾಲಕರಿದ್ದರಂತೆ. ಯುವಕನೊಬ್ಬನ ಮೇಲೆ ಹಲ್ಲೆ ತಮ್ಮ ಕಣ್ಣು ಮುಂದೆಯೇ ನಡೆಯುತ್ತಿದ್ದರೂ ಯಾರೊಬ್ಬರೂ ಪ್ರತಿಕ್ರಿಯಿಸದೆ ತಟಸ್ಥರಾಗಿದ್ದರು. ಅಲ್ಲಿದ್ದ ಜನಸಂದಣಿಯಲ್ಲಿ ಒಬ್ಬಿಬ್ಬರಾದರೂ ಮುಂದೆ ಬಂದು ಸಂತೋಷನ ಮೇಲಿನ ಹಲ್ಲೆಯನ್ನು ತಡೆಯಲು ಪ್ರಯತ್ನಿಸಿದರೆ ಪ್ರಾಯಶಃ ಅವನು ಸಾಯುತ್ತಿರಲಿಲ್ಲವೆಂದು ಅಲ್ಲಿನ ಪೊಲೀಸ್ ಕಮಿಷನ್ನರು ನಿಜಾಮುದ್ದೀನ್ ಹೇಳುತ್ತಾರೆ.

ಸಂಚಾರ ನಿಬಿಡವಾದ ಆ ಸಿಗ್ನಲ್‌ನಲ್ಲಿ ಇಡಲಾಗಿದ್ದ ಸಿಸಿ ಟಿವಿ ಚಿತ್ರಿಸಿಕೊಂಡ ವಿಡಿಯೋ ಫುಟೇಜ್ ನಲ್ಲಿ ತೋರಿಸುವಂತೆ ಸಿಗ್ನಲ್ ಸಮೀಪವೇ ನಡೆದ ಘಟನೆಗೆ ಮೂಕ ಪ್ರೇಕ್ಷಕರಾಗಿದ್ದ ಜನತೆ ಹಸಿರು ಸಿಗ್ನಲ್ ಬಂದ ಕೂಡಲೇ ತಮ್ಮ ತಮ್ಮ ದಿಕ್ಕುಗಳತ್ತ ಹೊರಟು ಹೋಗುತ್ತಾರೆ. ಯಾರೊಬ್ಬರೂ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡುವುದಾಗಲಿ, ಗಾಯಾಳುವಿನ ಸ್ಥಿತಿಯತ್ತ ಗಮನಿಸುವುದಾಗಲೀ ಮಾಡುವುದಿಲ್ಲ. ಪ್ರಾಯಶ: ಯಾರೊಬ್ಬರಾದರೂ ತಮ್ಮ ವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಒಯ್ದು ಚಿಕಿತ್ಸೆ ಕೊಡಿಸಿದ್ದರೆ ಯುವಕ ಬದುಕುತ್ತಿದ್ದನೇನೊ?

ಎರಡನೆಯ ಘಟನೆ ಕೂಡ ಹೆಚ್ಚು ಕಮ್ಮಿ ಇದೇ ರೀತಿ ನಡೆದಿದೆ. ಮೋಹನನ ಮೇಲೆ ಹಲ್ಲೆ ಮಾಡಿದ ಮಾಲೀಕ ಹಾಗೂ ಆತನ ಅನುಚರರು ಏನೂ ನಡೆದೇ ಇಲ್ಲವೇನೊ ಎಂಬಂತೆ ತಮ್ಮ ವ್ಯವಹಾರವನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಅಲ್ಲಿಗೆ ಆಗಮಿಸುವ ಅನೇಕ ಗ್ರಾಹಕರು ಕೂಡ ವ್ಯಕ್ತಿಯೊಬ್ಬ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿಯೂ ನೋಡದವರಂತೆ ತಮ್ಮ ವ್ಯಾಪಾರ ವ್ಯವಹಾರಗಳನ್ನು ಮುಗಿಸಿಕೊಂಡು ಹೋಗುತ್ತಾರೆ. ಅದೆಷ್ಟೋ ಹೊತ್ತಿನ ನಂತರ ದಾರಿಯಲ್ಲಿ ಹಾದು ಹೋಗುವ ಹೊಯ್ಸಳ ಪೊಲೀಸರು ಘಟನೆಯನ್ನು ಗುರುತಿಸಿ ವ್ಯಕ್ತಿಯನ್ನು ಉಳಿಸುವ ವಿಫಲ ಯತ್ನ ಮಾಡುತ್ತಾರೆ. ಇಲ್ಲೂ ಕೂಡ ಯಾರೊಬ್ಬರು ಪೊಲೀಸರಿಗೆ ದೂರು ದಾಖಲಿಸಲು ಮುಂದೆ ಬರಲಿಲ್ಲ.

ಘಟನೆ ಮೂರು- ಈ ಬಗ್ಗೆ ವ್ಯಾಖ್ಯಾನವೇ ಅನಗತ್ಯ. ಸಾಮಾನ್ಯ ಕುಟುಂಬವೊಂದರ ಮನೆಯಲ್ಲಿ ಕನ್ನ ಹಾಕಿದ ಕಳ್ಳರಿಗೆ ಸಿಕ್ಕಿದ್ದು ಪುಡಿಗಾಸೇ ಇದ್ದೀತು. ಆದರೆ ಈ ಪುಡಿಗಾಸಿನ ಆಸೆಗಾಗಿ ಮುಗ್ಧ ಬಾಲಕನೊಬ್ಬನ ಕುತ್ತಿಗೆ ಹಿಸುಕಿ ಸಾಯಿಸುವ ಹೀನ ಮಟ್ಟಕ್ಕೆ ಇಳಿಯಬಲ್ಲ ಕಳ್ಳರ ಕಠೋರ ಮನ:ಸ್ಥಿತಿಗೆ ಏನನ್ನ ಬೇಕು?

ಘಟನೆ ನಾಲ್ಕರಲ್ಲಿ ಪಾತ್ರದಾರಿಗಳಾದ ಪೊಲೀಸರ ಅಮಾನವೀಯ ವರ್ತನೆಯನ್ನು ಯಾವ ಭಾಷೆಯಲ್ಲಿ ಖಂಡಿಸೋಣ? ಕೇವಲ ಕನ್ನಡದಲ್ಲಿ ದೂರು ನೀಡಲಿಲ್ಲವೆಂಬ ಕಾರಣಕ್ಕೆ ದೂರು ದಾಖಲಿಸಿಕೊಳ್ಳುವುದನ್ನು ನಿರಾಕರಿಸಿ ತಮ್ಮ ಕನ್ನಡ ಪ್ರೇಮವನ್ನು ತೋರಿಸಿದ ಹೆಚ್.ಎಸ್.ಆರ್. ಬಡಾವಣೆಯ ಪೊಲೀಸರಿಗೆ ಸರ್ಕಾರ ಯಾವ ರೀತಿಯ ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಬಹುದು ಎಂಬ ಬಗ್ಗೆ ನಾನು ಕಾತರನಾಗಿ ಕಾಯುತ್ತಿದ್ದೇನೆ.

ಬೆಂಗಳೂರು ದಿನೇ ದಿನೇ ಜಾಗತಿಕ ನಗರವಾಗುತ್ತಿದೆ. ಉದ್ಯೋಗ ಅರಸಿ ಲಕ್ಷಾಂತರ ಮಂದಿ ಹೊರ ರಾಜ್ಯಗಳಿಂದ ವಲಸೆ ಬರುತ್ತಿದ್ದಾರೆ. ಅವರಿಗೆ ಉದ್ಯೋಗ ಗಿಟ್ಟಿಸಿಕೊಂಡು ಹೊಟ್ಟೆಹೊರೆಯುವ ಆತುರವಿರುತ್ತದೆ ವಿನಃ ಕನ್ನಡ ಭಾಷೆಯನ್ನು ಕಲಿತು ಪಾಂಡಿತ್ಯ ಪ್ರದರ್ಶಿಸುವ ಅಗತ್ಯವಿರುವುದಿಲ್ಲ. ತಮ್ಮ ದೈನಂದಿನ ವ್ಯವಹಾರಗಳಿಗೆ ಅಗತ್ಯವಾದ ಕನ್ನಡ ಪದಗಳನ್ನು ಉಚ್ಚರಿಸುವ ಸಮಯ ಸ್ಫೂರ್ತಿಯನ್ನು ಜೀವನವೇ ಅವರಿಗೆ ಕಲಿಸಿಕೊಡುತ್ತದೆ. ಅಮಾಯಕನೊಬ್ಬ ಮೋಸಕ್ಕೊಳಗಾದ ಅವನ ರಕ್ಷಣೆಗೆ ಧಾವಿಸುವುದು ಪೊಲೀಸರ ಕರ್ತವ್ಯ. ಅದರ ಬದಲು ಕೇವಲ ಆ ಶೋಷಿತನಿಗೆ ಕನ್ನಡ ಭಾಷೆ ಬರುವುದಿಲ್ಲ ಎಂಬ ಏಕ ಮಾತ್ರ ಕಾರಣಕ್ಕೆ ದೂರು ದಾಖಲಿಸಲು ನಿರಾಕರಿಸಿ ಆ ಮೂಲಕ ನೊಂದ ವ್ಯಕ್ತಿಗೆ ನ್ಯಾಯವನ್ನೆ ನಿರಾಕರಿಸುವ ಪೊಲೀಸರ ಈ ಹೃದಯಹೀನ ನಡವಳಿಕೆಯನ್ನು ವ್ಯಾಖ್ಯಾನಿಸುವ ಹೊಣೆಗಾರಿಕೆಯನ್ನು ಓದುಗರಾದ ನಿಮಗೇ ಬಿಟ್ಟಿದ್ದೇನೆ.

ಇಷ್ಟಕ್ಕೂ ಕನ್ನಡ ಭಾಷೆಯನ್ನು ಉದ್ಧಾರ ಮಾಡಲು ಅಸಂಖ್ಯ ಹುಟ್ಟು ಹೋರಾಟಗಾರರಿದ್ದಾರೆ. ಹಾದಿಗೊಂದು ಬೀದಿಗೊಂದು ವೇದಿಕೆಗಳಿವೆ. ಕನ್ನಡ ಪ್ರೇಮವನ್ನು ವರ್ಷವಿಡೀ ಪ್ರದರ್ಶಿಸಲು ಅವರಿಗೆ ನೆರವಾಗುವಂತಹ ವ್ಯವಸ್ಥೆಯೂ ಇಲ್ಲಿದೆ. ಹೀಗಿರುವಾಗ ಅಮಾಯಕರಿಗೆ ರಕ್ಷಣೆ ಕೊಡಲೆಂದೇ ನೇಮಕವಾಗಿರುವ ಪೊಲೀಸರು ‘ಕನ್ನಡ ಚಳುವಳಿಗಾರರಾಗಿ’ ಆ ಮೂಲಕ ಮೋಸಕ್ಕೊಳಗಾದ ಮುಗ್ಧ ಪರಭಾಷೆಯ ಯುವಕನೊಬ್ಬನಿಗೆ ಮಾಡಿದ ಅನ್ಯಾಯವನ್ನು ಈ ನಾಡಿನ ಜನತೆ ಸಹಿಸಿಕೊಳ್ಳುವರೇ?

ಪುಟದ ಮೊದಲಿಗೆ
Votes: 2 Rating: 5
"When will Indian police learn professionalism"? is a question of value of 2G spectrum!. One of the columnists of KS says, it is happening sloooowly!, and he didn't forget to add- expecting change in our lifetime is greed!. Contemporary India is materialization of a point where irony and devastation meet!-Dr.D.M.Sagar...
ಸತ್ಯವಂತರಿಗಿದು ಕಾಲವಲ್ಲ ||ಪ|| ದುಷ್ಟಜನರಿಗೆ ಸುಭಿಕ್ಷಕಾಲ || ........ ಎಂಬ ಕೀರ್ತನೆ ನೆನಪಾಯಿತು. ........ ಪೆಜತ್ತಾಯ ಎಸ್. ಎಮ್....
ಮೊದಲ ಎರಡು ಘಟನೆಗಳ ಕುರಿತು ಜನರು ನಿರ್ಲಿಪ್ತರಾಗಿರುವುದಕ್ಕೆ ಕಾರಣವನ್ನು ಎಲ್ಲರೂ ಬಲ್ಲರು. ಈ ಘಟನೆಗಳನ್ನು ಪ್ರತಿಭಟಿಸುವವರಿಗೆ ಪೊಲೀಸರಿಂದ ರಕ್ಷಣೆಯ ಬದಲಿಗೆ harassmentಏ ದೊರಕುತ್ತದೆಯೆಂದು ಎಲ್ಲರಿಗೂ ಗೊತ್ತು. ಇವೆರಡು ಘಟನೆಗಳಲ್ಲದೆ ಮೂರನೆಯದೂ ರೌಡಿಗಳು ಯಾವ ಮಟ್ಟಕ್ಕೇರಿದ್ದಾರೆಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದಕ್ಕೆ ಇಂದಿನ ನಮ್ಮ ಹಾಗೂ ವಿದೇಶೀ ಸಿನೆಮಾಗಳು ಯಾವ ರೀತಿ ಪ್ರಚೋದನೆ ಹಾಗೂ ಮಾರ್ಗದರ್ಶನ ನೀಡುತ್ತಿವೆಯೆಂಬುದನ್ನು ವಿವರಿಸಬೇಕಾಗಿಲ್ಲ. ಕನ್ನಡಿಗರು ಮೊದಲೆಲ್ಲಾ ತಮಿಳರನ್ನು ತಮಿಳಿನ ಅಂಧಾಭಿಮಾನಿಗಳೆನ್ನುತ್ತಿದ್ದರು. ಆದರೆ ನಮ್ಮ ಸರಕಾರೀ ಬಸ್ಸುಗಳ ಬರೇ ಕನ್ನಡದಲ್ಲಿರುವ ಬೋರ್ಡುಗಳನ್ನು ನೋಡಿಯೇ ಹೊರಗಿನಿಂದ ಬಂದವರು ಅದೇ ಮಾತನ್ನು ನಮ್ಮ ಬಗ್ಗೆ ಆಡುತ್ತಿದ್ದಾರೆ. ಕನ್ನಡದವರೋ, ಕನ್ನಡೇತರರೋ ದೂರು ತಂದಾಗ ದಾಖಲಿಸದಿರುವುದು ಕರ್ತವ್ಯಲೋಪವಲ್ಲವೇ?...
Hana, Asthigagi nagarikanenisikonda manava tanna pashuvruthiyalli thodagiru vaga, adannu niyanthresalendra khaki thottiruva policarema ‘mahamanavaru’ basheya kabanda bahuvinalli saluki manaviyatheyannu marethiruvudu nagarikatheya duranthave sari. . . . ....
naadina janate sahisikolluvare? Khanditaa sahisi kolluttaare. adakke ivellaa nadeyuttiruvudu......

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ