ಬುಧವಾರ, ಆಗಸ್ಟ್ 3, 2011

ಬ್ರೇಕಿಂಗ್ ನ್ಯೂಸ್‌ಗಳ ನೂಕಾಚೆ ದೂರ: ಸಿದ್ಧಾರ್ಥ ವ್ಯಾಖ್ಯಾನ
ಸಿದ್ಧಾರ್ಥ
ಶನಿವಾರ, 30 ಜುಲೈ 2011 (03:27 IST)

ರಾಜಧಾನಿಯಲ್ಲೀಗ ಅಂತೆ-ಕಂತೆಗಳದೇ ಸಾಮ್ರಾಜ್ಯ. ಎಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ. ಸುದ್ದಿ ಮಾಧ್ಯಮಗಳಂತೂ ಪ್ರತಿ ಕ್ಷಣ, ಪ್ರತಿ ಗಳಿಗೆ ಹೇಳಿಕೆಗಳನ್ನು ಬದಲಾಯಿಸುತ್ತಾ ಬ್ರೇಕಿಂಗ್ ನ್ಯೂಸ್‌ಗಳನ್ನು ಬ್ರೇಕ್ ಮಾಡುತ್ತಾ ಗೊಂದಲದಲ್ಲಿ ತೊಳಲಾಡುತ್ತಿವೆ. ಪಕ್ಷದ ವರಿಷ್ಠರ ಅಣತಿಗೆ ಮಣಿದು ಯಡಿಯೂರಪ್ಪ ರಾಜೀನಾಮೆ ಕೊಟ್ಟೇ ಬಿಟ್ಟರು ಎಂದು ಒಂದು ಸುದ್ದಿ ಮಾಧ್ಯಮ ಡಂಗೂರ ಹೊಡೆದರೆ, ಮತ್ತೊಂದು ಯಡಿಯೂರಪ್ಪ ಅವರ ಬಿಗಿ ವರ್ತನೆಯಿಂದ ಮುಖಭಂಗಿತರಾದ ಹೈಕಮಾಂಡ್ ವರಿಷ್ಠರು ವಾಪಸ್ ಎಂಬ ತಲೆ ಬರಹವನ್ನು ಪ್ರದರ್ಶಿಸುತ್ತಲೇ ಇರುತ್ತದೆ. ಹೈಕಮಾಂಡ್ ಹೈಡ್ರಾಮದಲ್ಲಿ (ಹೈಡ್ರಾಮ ಎಂದು ಕರೆದು ಕಲಾವಿದರಿಗೆ ಅವಮಾನ ಮಾಡಬೇಡಿ ಎನ್ನುತ್ತಾರೆ ಮಾ: ಹಿರಣಯ್ಯ.) ಶಿಸ್ತಿನ ಪಕ್ಷವೆಂದು ಹೆಸರಾಗಿದ್ದ ಬಿಜೆಪಿ ಯಾವ ಅಧೋಗತಿಗೆ ತಲುಪಿದೆ ಎಂಬುದಕ್ಕೆ ಕಳೆದೆರಡು ದಿನಗಳಿಂದ ರಾಜಧಾನಿಯಲ್ಲಾಗುತ್ತಿರುವ ವಿದ್ಯಮಾನಗಳೇ ಸಾಕ್ಷಿ.

ಒಂದು ಕಡೆ ಅಧಿಕಾರ ಬಿಟ್ಟು ಕೊಡಲೊಲ್ಲದ ಯಡಿಯೂರಪ್ಪ, ಅವರ ಬೆಂಬಲಕ್ಕೆ ಬಹಿರಂಗವಾಗಿ ನಿಂತ ೫೦ ಕ್ಕೂ ಹೆಚ್ಚು ಶಾಸಕರು, ಸಂಸತ್ ಸದಸ್ಯರು, ಉತ್ತರಾಧಿಕಾರದ ಪ್ರಶ್ನೆ ಇನ್ನೂ ಕಗ್ಗಂಟಾಗಿ ಉಳಿದಿರುವಾಗ ಅಧಿಕಾರ ಸ್ಥಾನ ಪಡೆಯಲು ಹಲವು ಬಿಜೆಪಿ ನಾಯಕರು ನಡೆಸುತ್ತಿರುವ ಪರಸ್ಪರ ಕಾಲೆಳೆಯುವ ಆಟ, ತೆರೆ ಮರೆಯ ಲಾಬಿ, ಹೇಗಾದೂ ಮಾಡಿ ತೆರವಾಗುವ ಸ್ಥಾನದಲ್ಲಿ ತಮ್ಮನ್ನು ಕೂರಿಸಿ ನನ್ನ ಜೀವನ ಪಾವನವಾಗುವಂತೆ ಮಾಡಿ ಎಂದು ಹಲುಬುತ್ತಿರುವ ಅನಂತ ನಾಯಕರು ಈ ಎಲ್ಲಾ ವಿದ್ಯಮಾನಗಳಿಂದ ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೂ ಕಸಿವಿಸಿ, ಮುಜುಗರ, ಹೇಸಿಗೆ ಉಂಟಾಗುತ್ತಿದೆ.

ಶುಕ್ರವಾರ ರಾಜಧಾನಿಯಲ್ಲಿ ನಡೆದ ವಿದ್ಯಮಾನಗಳನ್ನು ಗಮನಿಸಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ ರಾಜೀನಾಮೆ ನೀಡುವಂತೆ ಬಹಿರಂಗವಾಗಿ ಯಡಿಯೂರಪ್ಪನವರಿಗೆ ಆದೇಶಿಸುವ ಮೊದಲು ಆ ಪಕ್ಷದ ಹೈಕಮಾಂಡ್ ಯಡಿಯೂರಪ್ಪರವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಲೋಕಾಯುಕ್ತ ವರದಿಯ ಪ್ರತಿಗಳನ್ನು ದೆಹಲಿಗೆ ಕೊಂಡೊಯ್ದ ಮುಖ್ಯಮಂತ್ರಿಗಳು ಅವರಿಗೆ ಹೇಳಿದ್ದು ಇಷ್ಟೆ. ಈ ವರದಿಯನ್ನು ನಾನಿನ್ನು ಓದಿಲ್ಲಾ. ನೀವು ಓದಿ. ನಾನಿದನ್ನು ಕಾನೂನು ರೀತಿಯಲ್ಲಿ ಎದುರಿಸಲಿದ್ದೇನೆ. ಅಂದರೆ ರಾಜೀನಾಮೆ ನೀಡುವ ವಿಷಯ ಆಗ ಅವರ ಕನಸು ಮನಸಿನಲ್ಲಿಯೂ ಉದ್ಭವಿಸಿರಲಿಲ್ಲ. ತದನಂತರ ದೆಹಲಿಯಲ್ಲಿ ಏನೆಲ್ಲಾ ವಿದ್ಯಮಾನ ನಡೆಯಿತು. ಹೈಕಮಾಂಡ್‌ನ ಬಹುತೇಕ ಸದಸ್ಯರು ಯಡಿಯೂರಪ್ಪ ಅವರ ಬಹಿರಂಗ ಬೆಂಬಲಿಗರೇ ಆಗಿರುವಾಗ, ಅವರ ಏಕೈಕ ವಿರೋಧಿ ಲಾಲ್ ಕೃಷ್ಣ ಅದ್ವಾನಿಯವರ ಮಾತು ಮೇಲುಗೈ ಪಡೆಯಿತ್ತಾದರೂ ಹೇಗೆ? ದೆಹಲಿಯಿಂದ ಬೆಂಗಳೂರಿಗೆ ಬರುವ ವೇಳೆಗಾಗಲೇ ಯಡಿಯೂರಪ್ಪನವರಿಂದ ರಾಜೀನಾಮೆ ಪಡೆಯಬೇಕೆಂಬ ನಿರ್ಧಾರ ಹೊರ ಬಂದದ್ದು ಹೇಗೆ? ಈ ಎಲ್ಲವನ್ನು ಅಲ್ಲಿಯ ಚಿಂತಕರೇ ವಿಶ್ಲೇಷಿಸಬೇಕು.

ಒಂದು ವೇಳೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಯಡಿಯೂರಪ್ಪನವರಿಗೆ ಇಷ್ಟವಿಲ್ಲ ಎಂದಿಟ್ಟುಕೊಂಡರೂ ಗುರುವಾರ ಮಧ್ಯ ರಾತ್ರಿ ಅವರ ಸಹಿತ ಹೊರಡಿಸಲಾದ ಪತ್ರಿಕಾ ಹೇಳಿಕೆಗೆ ಯಾವ ಅರ್ಥವಿದೆ? ಆಷಾಢ ಮುಗಿದ ಮರು ದಿನವೇ ಅಂದರೆ ಭಾನುವಾರ ಮಧ್ಯಾಹ್ನ ತಾವು ರಾಜೀನಾಮೆ ನೀಡುವುದಾಗಿ ಯಡಿಯೂರಪ್ಪ ಒಪ್ಪಿಕೊಂಡಿದ್ದರು.

ಬಿಜೆಪಿ ವಲಯಗಳಲ್ಲಿ ಹರಿದಾಡುತ್ತಿರುವ ಒಂದು ವದಂತಿಯನ್ನು ನಂಬುವುದಾದರೆ ಯಡಿಯೂರಪ್ಪನವರ ಇಂದಿನ ಹಠಮಾರಿ ದೋರಣೆಯ ಹಿಂದೆ ಅವರ ಆಪ್ತ ಜ್ಯೋತಿಷಿಗಳ ಸಲಹೆ ಕಾರಣವಿದೆಯಂತೆ. ಶುಕ್ರವಾರ ರಾತ್ರಿ ೧೨ ಗಂಟೆಯ ತನಕ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡಿ. ಕೊಟ್ಟರೆ ನೀವು ಮತ್ತು ಬಿಜೆಪಿ ಪಕ್ಷ ನಾಮಾವಷೇಶವಾದಂತೆ. ಶುಕ್ರವಾರ ರಾತ್ರಿಯ ಗಡುವು ಕಳೆದರೆ ನಿಮ್ಮನ್ನು ಅಲುಗಾಡಿಸುವರು ಯಾರು ಇಲ್ಲಾ ಇನ್ನುಳಿದ ಅವಧಿಗೆ ನೀವೇ ಮುಖ್ಯಮಂತ್ರಿ.

ಶುಕ್ರವಾರ ನಡೆದ, ನಡೆಯುತ್ತಿರುವ ಶತರುದ್ರಹೋಮ, ಮೃತ್ಯುಂಜಯ ಜಪ ತಪಗಳೆಂಬ ವಿದ್ಯಮಾನಗಳು ಪ್ರಾಯಶಃ ಈ ವದಂತಿಗೆ ಇಂಬು ಕೊಡುವಂತಿದೆ. ದೆಹಲಿಯಿಂದ ವಾಪಸ್ಸು ಬಂದ ಯಡಿಯೂರಪ್ಪ ಸುಮಾರು ೩೦ ಗಂಟೆಗಳ ಕಾಲ ತಮ್ಮ ಅಧಿಕೃತ ನಿವಾಸದಿಂದ ಹೊರಬಂದಿರಲಿಲ್ಲ. ಹಾಗಂತ ಒಂದು ಗಳಿಗೆಯೂ ಸುಮ್ಮನೆ ಕೂರಲಿಲ್ಲ. ತಮ್ಮ ಬೆಂಬಲಿಗ ನಾಯಕರಿಗೆ ಖುದ್ದು ದೂರವಾಣಿ ಕರೆ ಮಾಡಿ ಬೆಂಗಳೂರಿಗೆ ಕರೆಸಿಕೊಂಡರು. ಅವರೊಂದಿಗೆ ಅಂತರಂಗದಲ್ಲಿ ಸಮಾಲೋಚನೆ ಮಾಡಿದರು. ತಮಗೆ ಬೆಂಬಲಕ್ಕಿದ್ದಾರೆಂದು ಮನವರಿಕೆಯಾದ ನಂತರವೇ ವರಿಷ್ಠರ ನಿರ್ಧಾರಕ್ಕೆ ವಿರೋಧವಾಗಿ ರಾಜೀನಾಮೆ ನೀಡದೇ ಇರುವ ತಮ್ಮ ನಿಲುವನ್ನು ಪ್ರಕಟಿಸಿದರು ಎನ್ನುತ್ತದೆ ಅವರ ಸಮೀಪದ ಸುದ್ದಿ ಮೂಲಗಳು.

ಕುಮಾರ ಕೃಪದಲ್ಲಿ ದಿನವಿಡೀ ಕೂತು ಸಂಜೆ ಕ್ಯಾಪಿಟಲ್ ಹೋಟೆಲ್‌ನಲ್ಲಿ ನಡೆಯಬೇಕಿದ್ದ ಬಿಜೆಪಿ ಶಾಸಕರ ಸಭೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ವರಿಷ್ಠರು ಯಡಿಯೂರಪ್ಪನವರಿಂದ ಈ ರೀತಿಯ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ. ಮುಖ್ಯಮಂತ್ರಿ ಪದವಿಗಾಗಿ ಜೊಲ್ಲು ಸುರಿಸುತ್ತಾ ಶಾಸಕರನ್ನು ಓಲೈಸುವ ಪ್ರಯತ್ನದಲ್ಲಿ ಮಗ್ನರಾಗಿದ್ಧ ನಾಯಕ ಗಣ್ಯರಿಗೂ ಯಡಿಯೂರಪ್ಪನವರ ಈ ನಿರ್ಧಾರ ಬರಸಿಡಿಲಂತೆ ಬಡಿಯಿತು.

ಆಷಾಢವಾದ್ದರಿಂದ ಶುಕ್ರವಾರದ ಸಭೆಯನ್ನು ಮುಂದೂಡಿ ಭಾನುವಾರ ಇಟ್ಟುಕೊಳ್ಳೋಣ ಎಂಬ ಕೆಲವು ಮುಖಂಡರ ಮನವಿಯನ್ನು ದೆಹಲಿಗೆ ರವಾನಿಸಿ ಅವರಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತಾ ಕುಳಿತ್ತಿದ್ದಾಗ ಯಡಿಯೂರಪ್ಪ ಕ್ಯಾಂಪಿನಿಂದ ಬಂದ ಈ ಸುದ್ದಿ ಅವರನ್ನು ಕಕ್ಕಾಬಿಕ್ಕಿಯಾಗಿಸಿತು. ಗತ್ಯಂತರವಿಲ್ಲದೆ ಮುಖ್ಯಮಂತ್ರಿಯ ನಿವಾಸಕ್ಕೆ ಧಾವಿಸಿ ಅವರನ್ನು ಸಂತೈಸುವ, ಓಲೈಸುವ ಹಾಗೂ ಬೆದರಿಕೆ ಹಾಕುವ ಕಾರ್ಯಗಳನ್ನು ಒಟ್ಟಿಗೆ ಮಾಡಿ ಫಲಿತಾಂಶ ಸಿಗದೆ ಹತಾಶರಾದರು.

ಶನಿವಾರದಂದು ರಾಜಧಾನಿಯಲ್ಲಿ ಹರಿದಾಡುತ್ತಿರುವ ವದಂತಿಯ ಮುಖ್ಯಾಂಶಗಳು ಇಂತಿವೆ.
ಯಡಿಯೂರಪ್ಪ ಪದತ್ಯಾಗಕ್ಕೆ ಇನ್ನೂ ಕಾಲ ಕೂಡಿಬಂದಿಲ್ಲ.
ತಮ್ಮ ನಂತರ ತಾವು ಹೇಳಿದವರೇ ಮುಖ್ಯಮಂತ್ರಿಯಾಗಬೇಕು ಎಂಬ ಹಠವನ್ನು ಬಿಟ್ಟಿಲ್ಲ.
ಯಾವ ಕಾರಣಕ್ಕೂ ಅನಂತಕುಮಾರ್ ಮುಖ್ಯಮಂತ್ರಿಯಾಗಕೂಡದು.
ಒಂದು ವೇಳೆ ಹೈಕಮಾಂಡ್ ಬಹುಸಂಖ್ಯಾತ ಶಾಸಕರ ಅಭಿಪ್ರಾಯಗಳಿಗೆ ವಿರುದ್ಧವಾಗಿ ಅನಂತಕುಮಾರ್‌ರವರನ್ನೇ ಆರಿಸಿದರೆ ಪಕ್ಷ ಒಡೆಯಲು ಸಿದ್ಧ.
ಯಡಿಯೂರಪ್ಪ ಅವರ ಪ್ರತಿರೋದಕ್ಕೆ ಬಹುಸಂಖ್ಯಾತ ಶಾಸಕರ ಬೆಂಬಲವಿದೆ ಎಂದು ಮನವರಿಕೆಯಾದಾಗ ಬಹುಮತಾಭಿಪ್ರಾಯಕ್ಕೆ ಮನ್ನಣೆ ಕೊಡುವ ನಾಟಕವಾಡಿ ಹೈ ಕಮಾಂಡ್ ಈ ಪ್ರಕರಣ ತಿಪ್ಪೆ ಸಾರಿಸಬಹುದು.
ಈ ಎಲ್ಲಾ ವಿದ್ಯಮಾನಗಳನ್ನು ಕುತೂಹಲದಿಂದ ಗಮನಿಸುತ್ತಿರುವ ರಾಜ್ಯಪಾಲರು ಏನು ಮಾಡಬಹುದು? ಲೋಕಾಯುಕ್ತರ ಶಿಪಾರಸ್ಸನ್ನು ಎತ್ತಿ ಹಿಡಿದು ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸಮ್ಮತಿ ನೀಡಬಹುದೇ?
ಬಿಜೆಪಿ ಹೋಳಾಗುವುದು ಶತ ಸಿದ್ಧ ಎಂದಾದರೆ ಕಾಂಗೆಸ್-ಜನತಾದಳ ಪಕ್ಷಗಳು ಏನು ಮಾಡಬಹುದು?
ವಿಧಾನ ಸಭೆಯ ವಿಸರ್ಜನೆಗೆ ಒತ್ತುಕೊಡುತ್ತದೆಯೇ ಇಲ್ಲಾ ಬಿಜೆಪಿಯ ಪಂಗಡವೊಂದರ ಜೊತೆ ಸೇರಿ ಸರ್ಕಾರ ರಚಿಸಲು ಯಾರಾದರೂ ಮುಂದೆ ಬರುತ್ತಾರೆಯೇ?
ಈ ಎಲ್ಲಾ ವಿದ್ಯಮಾನಗಳಿಗೂ ಪ್ರಾಯಶಃ ಭಾನುವಾರ ಉತ್ತರ ಸಿಕ್ಕೀತು.

ಪುಟದ ಮೊದಲಿಗೆ
Votes: 3 Rating: 2.33
Atleast BJP is taking some action. What about JDS and CONGRESS?? Their leaders Kumaraswamy and Dharam singh are also involved. Why public/PRESS/media not demanding anything from those?....cause the whole indian public is corrupt....
Re: ಇನ್ನೂ ಇನ್ನೂ ಹೀಗೂ ವಾದ ಮಾಡುವವರೂ ಇದ್ದಾರಲ್ಲಾ ಅಂತ ಆಶ್ಚರ್ಯವಾಗ್ತಿದೆ....!? ashcharya enthadu maaraayre..? deshavanne haridu mukkidaroo samarthisuva bhattaMgigaLu chiranjeevigalu svaami
Re: ಇನ್ನೂ ಇನ್ನೂ ಹೀಗೂ ವಾದ ಮಾಡುವವರೂ ಇದ್ದಾರಲ್ಲಾ ಅಂತ ಆಶ್ಚರ್ಯವಾಗ್ತಿದೆ! ಯಡಿಯೂರಪ್ಪ ಮತ್ತವರ ಗ್ಯಾಂಗ್ ಪ್ರಸ್ತುತ ಮಂತ್ರಿಮಂಡಲದ ಪ್ರತಿನಿಧಿಗಳು, ನೆನಪಿರಲಿ. ಶಿಕ್ಷೆ ವಿಚಾರ ಪ್ರತಿಯೊಬ್ಬರಿಗೂ ಇದ್ದೇ ಇದೆ ಮುಂದೆ. ಹಾಲಿ ಆಡಳಿತಗಾರರು ಅಪರಾಧಿಗಳಾಗಿದ್ದೂ ಕುರ್ಚಿ ಬಿಡಲೊಲ್ಲದ ವಿಚಿತ್ರ ನೀತಿಬಾಹಿರತೆ ತೋರಿಸುತ್ತಿರುವಾಗ ಅದುವೇ ಸುದ್ದಿಯಾಗುವುದಲ್ಲದೆ, ನಾಳೆ ನಡೆಯುವ ನ್ಯಾಯ ವಿಚಾರಣೆಯ ಬಗ್ಗೆ ಈಗಲೇ ತಮಟೆ ಬಡಿಯುತ್ತಾರೇನು? ನಾಳಿನ ಮಾರಿಹಬ್ಬ ಇದ್ದೇ ಇದೆ. ಇಲ್ಲಿ ಯಾರೂ -ಯಾವ ಪಹ್ಷದವರೂ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲಾರರು. ಪೂಜೆ -ಹವನಗಳಿಂದ ಪ್ರತೀ ಬಾರಿಯೂ ಕುಣಿಕೆ ಬೀಳುವುದು ತಪ್ಪುವುದಿಲ್ಲ. ಅಲ್ಲಿವರೆಗೂ ಕಾಯಿರಿ. ಇಷ್ಟಾಗಿಯೂ ಯಡಿಯೂರಪ್ಪನ ಮೇಲೆ ನಿಮಗೆ ಮಮತೆ ಉಕ್ಕಿ ಹರಿಯುತ್ತಿದೆಯಾದರೆ... ಅವರ ನೋವು ನಿಮ್ಮ ನೋವೇ ಅನ್ನುವಷ್ಟು ಬುದ್ಧಿ ದಿವಾಳಿತನ ನಿಮ್ಮದಾದರೆ, ನಿಮ್ಮನ್ನು ಯಾರೂ ಸಂತೈಸಲಾರರು. ಅನುಭವಿಸಿ... ಗುಡ್ ಲಕ್!
Re: .cause the whole indian public is corrupt.... Kaamale kannu andre idappa
ಶುಕ್ರವಾರ ರಾತ್ರಿ ೧೨ ಗಂಟೆಯ ತನಕ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡಿ. ಕೊಟ್ಟರೆ ನೀವು ಮತ್ತು ಬಿಜೆಪಿ ಪಕ್ಷ ನಾಮಾವಷೇಶವಾದಂತೆ..... ? ene aadroo karnatakada Maana antu naamaavashesha aaythalla... maarayre...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ