ಬುಧವಾರ, ಆಗಸ್ಟ್ 10, 2011

My new article in Kendasampige.com

ಯಡಿಯೂರಪ್ಪನವರಿಗೆ ಯಡಿಯೂರಪ್ಪನವರೇ ಶತ್ರು:ಸಿದ್ದಾರ್ಥ ವ್ಯಾಖ್ಯಾನ
ಸಿದ್ಧಾರ್ಥ
ಬುಧವಾರ, 10 ಆಗಸ್ಟ್ 2011 (04:07 IST)
ಯಡಿಯೂರಪ್ಪ

೩೩ ವರ್ಷಗಳ ವೃತ್ತಿ ಜೀವನದಲ್ಲಿ ಅರ್ಧಾಂಶಕ್ಕೂ ಹೆಚ್ಚು ಕಾಲ ಅಧಿಕಾರಕ್ಕೆ ರಾಜಕಾರಣಿಗಳ ಪತ್ರಿಕಾ ಕಾರ್ಯದರ್ಶಿಯಾಗಿ ಆಪ್ತ ಸಿಬ್ಬಂದಿ ವರ್ಗದಲ್ಲಿ ಕೆಲಸ ಮಾಡಿರುವ ನನಗೆ ಅಧಿಕಾರ ತರುವ ಸಂತೋಷ, ಅಧಿಕಾರ ತ್ಯಾಗದಿಂದ ಬರುವ ವಿಷಾಧ ಎರಡನ್ನೂ ಅತೀ ಸಂಮೀಪದಿಂದ ನೋಡಿ ಅನುಭವಿಸುವ ಅವಕಾಶ ಸಿಕ್ಕಿದೆ. ಅಧಿಕಾರ ಹೋದ ಕೂಡಲೆ, ಚುನಾವಣೆ ಸೋತ ಕೂಡಲೆ, ಆಕಾಶವೇ ಕಳಚಿ ಬಿದ್ದಂತೆ ಮೂಲೆಗೆ ಬೀಳುವ ರಾಜಕಾರಣಿಗಳನ್ನು, ಹೋದದ್ದು ಅಧಿಕಾರ ತಾನೇ? ಎಂದು sportiveಆಗಿ ನಗು ಮುಖ ಧರಿಸುವ ಧುರೀಣರನ್ನು ನೋಡಿದ್ದೇನೆ. ಹೊಟ್ಟೆಯಲ್ಲಿನ ನೋವು, ಮತ್ಸರ, ಈರ್ಷೆಗೆ ಸಿಲುಕಿ ಉತ್ತರಾಧಿಕಾರಿಯ ಪ್ರಮಾಣ ವಚನ ಸಮಾರಂಭಕ್ಕೆ ಗೈರುಹಾಜರಾದ ನಿರ್ಗಮಿತ ಮುಖ್ಯಮಂತ್ರಿಗಳನೇಕರನ್ನು ನೋಡಿದ್ದೇನೆ. ಅಧಿಕಾರ ಗ್ರಹಣದ ನಂತರ ಖುದ್ದಾಗಿ ಕಛೇರಿಗೆ ಕೊಂಡೊಯ್ದು ಪ್ರತಿಷ್ಠಾಪಿಸಿ ಶುಭ ಹಾರೈಸಿ ಹಗುರ ಹೃದಯದೊಂದಿಗೆ ಖಾಸಗಿ ವಾಹನದಲ್ಲಿ ಮನೆಗೆ ತೆರಳಿದ ವಿವೇಕಿಗಳನ್ನು, ಸಾಮಾನ್ಯ ಶಾಸಕರಾಗಿ ಅತೀವ ಉತ್ಸ್ಸಾಹದಿಂದ ಶಾಸನ ಸಭೆಗೆ ಮರಳಿ ಕ್ರಿಯಾತ್ಮಕವಾಗಿ ಕಲಾಪಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಿದ ಹಿರಿಯರನೇಕರ ಮಾತುಗಳು ನನ್ನ ಕಿವಿಗಳಲ್ಲಿ ಇನ್ನೂ ರಿಂಗಣಿಸುತ್ತಿವೆ.

ಇವೆಲ್ಲವೂ ನೆನಪಾದದ್ದು ಯಡಿಯೂರಪ್ಪನವರು ಅಧಿಕಾರ ಕಳೆದುಕೊಂಡ ಮರುಕ್ಷಣವೇ ಅವರ ಮನೆಯ ಮುಂದೆ ತುಂಬಿದ್ದ ಗೋಜುಗೋಜು ಜನ ಜಂಗುಳಿ ಏಕಾಏಕಿ ಮಾಯವಾದಾಗ. ಅಧಿಕಾರ ತರುವ ಜನ ಭಾಹುಳ್ಯವನ್ನು ಅಧಿಕಾರ ನಂತರದ ಜನ ವಿಯೋಗವನ್ನು ಪತ್ರಿಕೆಯೊಂದು ಛಾಯಾಚಿತ್ರಗಳ ಮೂಲಕ ಸಮರ್ಥವಾಗಿ ಪ್ರತಿಬಿಂಬಿಸಿತ್ತು. ಗಾದೆ ಮಾತೇ ಇಲ್ಲವೇ- ನಗುವಾಗ ಎಲ್ಲ ನೆಂಟರು ಅಳುವಾಗ ಯಾರೂ ಇಲ್ಲ.

ಅಧಿಕಾರ ಶಾಶ್ವತವಲ್ಲ. ನಿಜ. ಆದರೆ ಪರಿಸ್ಥಿತಿಯ ಒತ್ತಡಗಳಿಗೆ ಸಿಲುಕಿ ಅಧಿಕಾರ ತ್ಯಜಿಸಲೇಬೇಕಾಗಿ ಬಂದಾಗ ವ್ಯಕ್ತಿಯೊಬ್ಬ ಯಾವ ರೀತಿ ನಡೆದುಕೊಳ್ಳುತ್ತಾನೆ ಎಂಬ ಸಂಗತಿ ಆ ವ್ಯಕ್ತಿಯ ಮಾನಸಿಕ ಸಮಚಿತ್ತತೆಯನ್ನು ತೋರಿಸುತ್ತದೆ.

ಹೈ ಕಮಾಂಡ್‌ನೊಂದಿಗೆ ಬಹಿರಂಗವಾಗಿಯೇ ಗುದ್ದಾಟ ನಡೆಸಿ ಕಡೆಗೆ ಸ್ಥಾನ ತ್ಯಜಿಸಲೇಬೇಕಾಗಿ ಬಂದ ಪ್ರಸಂಗದಲ್ಲಿ ಕೋಪೋದ್ರಿಕ್ತರಾದ ಯಡಿಯೂರಪ್ಪ ಹಿರಿಯರೊಬ್ಬರ ಲ್ಯಾಪ್ ಟಾಪ್ ಜಖಂ ಮಾಡಿದರು, ಸಹೋದ್ಯೋಗಿಯೊಬ್ಬರ ಕೆನ್ನೆಗೆ ಬಾರಿಸಿದರು, ಮಕ್ಕಳನ್ನು ಎದುರಿಗೆ ನಿಲ್ಲಿಸಿ ಸಮಾ ಸಮಾ ಬೈದರು ಎಂಬ ಪತ್ರಿಕಾ ವರದಿಗಳನ್ನು ಓದಿ ಅಧಿಕಾರ ತ್ಯಾಗದ ಹಲವಾರು ದುಷ್ಟಾಂತಗಳನ್ನು ಸ್ವಯಂ ಕಂಡು ಅನುಭವಿಸಿದ್ದ ನನಗೆ ಆಶ್ಚರ್ಯವೇನೂ ಅನಿಸಿರಲಿಲ್ಲ, ಅಂತರಿಕ್ಷದಲ್ಲಿ ರಾರಾಜಿಸುತ್ತಿದ್ದ ಪಕ್ಷಿಗೆ ಏಕಾಏಕಿ ರೆಕ್ಕೆ ಪುಕ್ಕ ಕಿತ್ತು ನೆಲಕ್ಕೆ ದೂಡಿದಾಗ ಆಗಬಹುದಾದ ವೇದನೆಯನ್ನು ಯಾರೂ ಊಹಿಸಬಲ್ಲರು.

ಆದರೆ ನನಗೆ ನಿಜಕ್ಕೂ ಆಶ್ಚರ್ಯಕರವಾಗಿ ಕಂಡದ್ದು ಯಡಿಯೂರಪ್ಪನವರ ಆನಂತರದ ವರ್ತನೆ. ತಮ್ಮ ಸ್ವ್ವಭಾವಕ್ಕೆ ವಿರುದ್ಧವಾಗಿ ಅವರು ಮರಳಿ ಜಿಗಿದು ಬಂದರು. ಇಂಗ್ಲಿಷ್‌ನಲ್ಲಿ bounce back ಎನ್ನುತ್ತಾರಲ್ಲ ಹಾಗೆ. ಯಾವುದೇ ಕೋಪ ತಾಪ, ಸಿಟ್ಟು ಸೆಡವುಗಳನ್ನು ಬಹಿರಂಗವಾಗಿ ಪ್ರದರ್ಶನ ಮಾಡದೆ, ರಾಗ ದ್ವೇಷಗಳನ್ನು ಮನಸ್ಸಿನಲ್ಲಿಯೇ ಹತ್ತಿಕ್ಕಿ ನಗುವಿನ ಮುಖವಾಡ ಧರಿಸಿದರು. ನಸು ನಗುತ್ತಲೇ ಉತ್ತರಾಧಿಕಾರಿ ಮತ್ತವರ ಸಂಪುಟ ಸದಸ್ಯರ ಪ್ರಮಾಣವಚನ ಸಮಾರಂಭಗಳಲ್ಲಿ ಭಾಗವಹಿಸಿದರು. ಕಡು ವೈರಿಗಳೆನಿಕೊಂಡವರನ್ನು ತಬ್ಬಿ ಮಾತಾಡಿದರು, ಮಿತ್ರರನ್ನು ಆಲಂಗಿಸಿದರು, ಅಷ್ಟೇ ಏಕೆ ಪತ್ರಕರ್ತರನ್ನೂ ಹತ್ತಿರ ಕರೆದು ಹೆಗಲ ಮೇಲೆ ಕೈ ಹಾಕುವ ಸ್ನೇಹ ಭಾವ ಪ್ರದರ್ಶಿಸಿದರು. ಕರ್ನಾಟಕ ರಾಜಕಾರಣದ ದುರಂತ ನಾಯಕ ಎಂದು ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನ ಮೋಹನ ರಾಯರು ಪರಿತಾಪ ವ್ಯಕ್ತಪಡಿಸಿದ್ದು ಸರಿಯೇ ಇದ್ದಿತು.

ಯಡಿಯೂರಪ್ಪ ಇತರ ರಾಜಕಾರಣಿಗಳಿಗಿಂತ ಪ್ರತ್ಯೇಕವಾಗಿ ನಿಂತದ್ದು ನಿಲ್ಲುವುದು ಅವರದೇ ಆದ ರಾಜಕೀಯ ತಂತ್ರ ವೈಖರಿಗಳಿಂದ. ಇನ್ನೇನು ಮುಳುಗಿಯೇ ಹೋದರು ಎಂಬಂತಹ ಪರಿಸ್ಥಿತಿಯಲ್ಲ್ಲೂ ಫೀನಿಕ್ಸ್‌ನಂತೆ ಮೈಕೊಡವಿ ಮೇಲೆದ್ದು ಬಂದ ವ್ಯಕ್ತಿತ್ವ ಅವರದ್ದು. ತಮ್ಮ ಪ್ರತಿಕೂಲವಾಗಿ ಬಂದ ಸನ್ನಿವೇಶವನ್ನೆ ತಮ್ಮ ಲಾಭಕ್ಕೆ ಪರಿವರ್ತಿಸಿಕೊಂಡ ಯಶಸ್ವಿ ರಾಜಕಾರಣಿ ಅವರು.

ಈಗಲೂ ಅವರು ಮಾಡಿದ್ದು ಅದನ್ನೇ. ಯಡಿಯೂರಪ್ಪ ನಿರ್ಗಮನದಿಂದ ತೆರವಾಗುವ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತು ತಮ್ಮ ಜೀವನದ ಕನಸನ್ನು ನನಸು ಮಾಡಿಕೊಳ್ಳಲು ಸೈಡ್ ವಿಂಗ್‌ನಲ್ಲಿ ಎಲ್ಲವನ್ನು ಅಣಿಮಾಡಿಕೊಳ್ಳುತ್ತಿದ್ದ ಅನಂತ ಕುಮಾರ್ ರವರ ಕನಸನ್ನು ಹೊಸಕಿ ಹಾಕುವಲ್ಲಿ ಯಡಿಯೂರಪ್ಪರವರ ಕೈಚಳಕ ಅಸಾದೃಶ್ಯ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬಂತೆ ಈ ಕಾರ್ಯಕ್ಕೆ ಅವರು ಆರಿಸಿಕೊಂಡದ್ದು ಅನಂತ ಕುಮಾರರವರ ವಿಶ್ವಾಸ ಬಣದ ನಾಯಕರನ್ನೇ.

ಎಷ್ಟಾದರು ಯಡಿಯೂರಪ್ಪ ಕರ್ನಾಟಕದಲ್ಲಿ ಬಿಜೆಪಿ ಕಾಲೂರಿ ನಿಲ್ಲಲು ಕಾರಣೀಭೂತರು. ವಿಧಾನಸಭೆಯಲ್ಲಿ ತಮ್ಮ ಪಕ್ಷದ ಬಲ ಎರಡರಿಂದ ನೂರತ್ತಕ್ಕೆ ಏರುವಲ್ಲಿ ಯಡಿಯೂರಪ್ಪ ಅವರ ಜೀವಿತದ ಹೋರಾಟವೇ ಕೊಡುಗೆ ಎಂಬ ಮಮಕಾರ ಗೌರವಗಳಿಗೆ ಇನ್ನು ಚ್ಯುತಿ ಬಂದಿಲ್ಲ. ಇದನ್ನೇ ಊರುಗೋಲಾಗಿಟ್ಟು ಕೊಂಡು ಅವರು ಜಗದೀಶ್ ಶೆಟ್ಟರ್ ಅವರನ್ನು ಮಣಿಸಿದರು. ಲಿಂಗಾಯಿತರ ಪಂಗಡವನ್ನು ಒಡೆಯಲು ಅನಂತ ಕುಮಾರ್ ಸ್ವಯಂ ಲಿಂಗಾಯಿತರೇ ಆದ ಜಗದೀಶ್ ಶೆಟ್ಟರ್ ರವರನ್ನು ಮುಖ್ಯಮಂತ್ರಿಯ ಅಭ್ಯರ್ಥಿಯಾಗಿ ಮುಂದೆ ಮಾಡಿದರೂ ಯಡಿಯೂರಪ್ಪ ಬೆನ್ನಿಗಿರುವ ಲಿಂಗಾಯಿತರ ಗುಂಪನ್ನು ಒಡೆಯಲಾಗಲಿಲ್ಲ. ಮುಖ್ಯಮಂತ್ರಿ ಚುನಾವಣೆಯಲ್ಲಿ ಪರಾಭವಗೊಂಡು ಉಪಮುಖ್ಯಮಂತ್ರಿಯೂ ಆಗದೆ ಮಾಮೂಲಿ ಮಂತ್ರಿಯಾಗಿ ಜಗದೀಶ್ ಶೆಟ್ಟರು ಸದಾನಂದ ಸಂಪುಟದ ಒಳಗೆ ಸೇರಬೇಕಾಗಿ ಬಂದ ಪ್ರಸಂಗ ಕರ್ನಾಟಕದ ರಾಜಕಾರಣದಲ್ಲಿ ಯಡಿಯೂರಪ್ಪನವರೇ ಈಗಲೂ ನಂ.ಒನ್ ಎಂಬ ವಾಸ್ಥವ ಸ್ಥಿತಿಯನ್ನು ಸಾಬೀತು ಪಡಿಸಿತು.

ಹಾಗೆಂದೇ ಯಡಿಯೂರಪ್ಪ ಸದ್ಯಕ್ಕೆ ಅಧಿಕಾರ ವಂಚಿತರಾದರೂ ರಾಜ್ಯದ ಮಟ್ಟಿಗೆ ಈಗಲೂ ಅವರೇ ಪ್ರಶ್ನಾತೀತ ನಾಯಕರು. ಅವರು ಎಷ್ಟೇ ಭ್ರಷ್ಟರೆಂದು ಲೋಕಾಯುಕ್ತ, ಪ್ರತಿಪಕ್ಷಗಳು ಹಾಗೂ ಪತ್ರಿಕೆಗಳು ಸಾರಿ ಸಾರಿ ಹೇಳಿದರು ಕೂಡ ಬಲಾಢ್ಯ ಲಿಂಗಾಯಿತರ ಬೆಂಬಲಕ್ಕೆ ಅವರೇ ಸಂಪೂರ್ಣವಾಗಿ ಭಾದ್ಯರು. ಯಡಿಯೂರಪ್ಪನವರಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಯಾವ ನಾಯಕಮಣಿಯು ಬಿಜೆಪಿ ಏಕೆ ಇತರೆ ಯಾವುದೇ ಪಕ್ಷಗಳಲ್ಲಿಯೂ ಕಾಣುತ್ತಿಲ್ಲ. ಈಗಲೂ ಜನಬೆಂಬಲ ಬಿಜೆಪಿ ಪಕ್ಷಕ್ಕೆ ಇದೆ ಎಂಬುದಕ್ಕೆ ಇದುತನಕ ಗೆದ್ದ ಎಲ್ಲಾ ವಿಧಾನಸಭಾ ಉಪಚುನಾವಣೆಗಳಲ್ಲಿ, ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಚುನಾವಣೆಗಳ ಪಲಿತಾಂಶವನ್ನು ಗಮನಿಸಿದರೆ ಸಾಕು. ಚುನಾವಣೆಗಳಲ್ಲಿ ಕೆಂಪು ನೋಟಿನ ಹೊಳೆ ಹರಿಸಿ ಗೆಲ್ಲುವ ತಂತ್ರವನ್ನು ರೂಢಿಸಿಕೊಂಡಿದ್ದರೆ ಅದು ಬಿಜೆಪಿ ಪಕ್ಷ ಮಾತ್ರ. ಹಾಗೆಂದೇ ಮುಂದಿನ ಚುನಾವಣೆಯಲ್ಲಿಯೂ ಯಡಿಯೂರಪ್ಪ ಅವರ ಕೈಚಳಕಕ್ಕೆ ಭೂಮಿಕೆ ಸಿದ್ಧವಾಗಿಯೇ ಇದೆ. ಮೊನ್ನೆಯ ರಹಸ್ಯ ಮತದಾನದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಹೋಗಿದ್ದ ಶಾಸಕರು ಮರಳಿ ಅವರ ತೆಕ್ಕೆಗೆ ಬರುವ ಆ ಮೂಲಕ ಅನಂತ ಕುಮಾರ್ ಬಣ ಖಾಲಿಯಾಗುವ ಯಾವುದೇ ಸಂಶಯವಿಲ್ಲ.

ಬಿಜೆಪಿಗೆ ಸಂವಾದಿಯಾಗಿ ನಿಲ್ಲಬಲ್ಲ ಮತ್ತೊಂದು ಪಕ್ಷ ಕಾಂಗ್ರೆಸ್ ಆಂತರಿಕ ಕಲಹಗಳಿಂದ, ನಾಯಕರುಗಳ ಪರಸ್ಪರ ಸೆಣಸಾಟಗಳಿಂದ ಜರ್ಜರಿತಗೊಂಡಿದೆ. ೧೯೯೯ರಲ್ಲಿ ಶೇ. ೪೨ ರಷ್ಟಿದ್ದ ಈ ಪಕ್ಷದ ಓಟ್ ಷೇರ್ ಈಗ ದಯನೀಯ ೨೨ಕ್ಕೆ ಬಂದಿಳಿದಿದೆ. ಆಪರೇಷನ್ ಕಮಲ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಹಲವಾರು ನಾಯಕರು ಪಕ್ಷ ತ್ಯಜಿಸಿ ಬಿಜೆಪಿ ಇಲ್ಲವೇ ಜೆಡಿಎಸ್ ಪಾಲಾಗಿದ್ದಾರೆ. ಬಹುದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ನಿಷ್ಠೆ ಬದಲಿಸಿದ್ದಾರೆ. ಬಹುತೇಕ ನಿದ್ರಾವಸ್ಥೆಯಲ್ಲಿರುವ ಈ ಪಕ್ಷವನ್ನು ಮುಂದಿನ ಚುನಾವಣೆಯ ವೇಳೆಗಾದರೂ ಮರಳಿ ಮುಖ್ಯ ವಾಹಿನಿಗೆ ತರಲು ಡಾ. ಜಿ. ಪರಮೇಶ್ವರ್ ಇರಲಿ ಸಾಕ್ಷಾತ್ ಪರಮೇಶ್ವರನೇ ಬಂದರೂ ಅಸಾಧ್ಯದ ಕೆಲಸವಾಗಿ ಕಾಣುತ್ತಿದೆ.

ಇನ್ನು ಜನತಾದಳ ಕುಟುಂಬವೊಂದರ ಯಜಮಾನಿಕೆಯಲ್ಲಿ ಸಿಲುಕಿ ಹಾಕಿಕೊಂಡಿರುವ ಈ ಪಕ್ಷಕ್ಕೆ ಅನ್ಯ ನಾಯಕರೇ ಇಲ್ಲ. ದೇವೇಗೌಡರ ಧನಿ ದಿನೇ ದಿನೇ ಕ್ಷೀಣವಾಗುತ್ತಿದೆ. ವಯಸ್ಸಿನ ಪ್ರಭಾವ ಅವರ ಮೇಲೆ ಪಕ್ಷದ ಮೇಲೆ ನಿಚ್ಚಳವಾಗಿ ಕಾಣುತ್ತಿದೆ. ಯಾವ ಹೋಮವಾಗಲಿ ಪೂಜೆ ಪುನಸ್ಕಾರಗಳಾಗಲಿ ಜನತಾದಳಕ್ಕೆ ಮರಳಿ ಅಧಿಕಾರ ಗಳಿಸಿಕೊಡುವ ಸಾಧ್ಯತೆ ಕಾಣುತ್ತಿಲ್ಲ. ಹೊಸ ತಲೆಮಾರಿನ ನಾಯಕನಾಗಿ ಬೆಳೆಯಬಹುದಾಗಿದ್ದ ಕುಮಾರಸ್ವಾಮಿ ಏನೇ ತಿಪ್ಪರಲಾಗ ಹಾಕಿದರು ವಿಶ್ವಾಸ ದ್ರೋಹದ ಕಳಂಕದಿಂದ ಹೊರಬರಲಾಗುತ್ತಿಲ್ಲ. ಕಳೆದ ವರ್ಷ ಹಣ ಅಧಿಕಾರದ ಆಮಿಷ ತೋರಿಸಿ ಯಡಿಯೂರಪ್ಪ ಸರ್ಕಾರದ ವಿರುದ್ಧ ೧೬ ಬಿಜೆಪಿ ಶಾಕರನ್ನು ಬಂಡಾಯ ಎಬ್ಬಿಸುವಲ್ಲಿ ಯಶಸ್ವಿಯಾದ ಕುಮಾರಸ್ವಾಮಿ ತದ ನಂತರ ಅವರನ್ನು ನಡುನೀರಿನಲ್ಲಿ ಕೈಬಿಟ್ಟರೆಂಬ ಆರೋಪ ಈಗಲೂ ಜೀವಂತವಿದೆ. ಬೇರೆ ಪಕ್ಷದ ಶಾಸಕರಿರಲಿ ಅವರ ಪಕ್ಷದವರೇ ಅವರನ್ನು ನಂಬದ ಪರಿಸ್ಥಿತಿ ಉಂಟಾಗಿದೆ.

ನಿಜ ಮುಂದಿನ ದಿನಗಳು ಯಡಿಯೂರಪ್ಪನವರಿಗೆ ಸವಾಲಾಗಲಿವೆ. ಒಂದು ಕಡೆ ತಮ್ಮ ಮೇಲಿನ ಆರೋಪಗಳ ವಿರುದ್ಧ ಕಾನೂನು ಸಮರವನ್ನು ಪರಿಣಾಮಕಾರಿಯಾಗಿ ಎದುರಿಸಿ ನಿಲ್ಲುವುದು, ತಮ್ಮಿಂದ ಕಳಚಿ ಹೋಗಬಹುದಾದ ಶಾಸಕರನ್ನು ಹೇಗಾದರೂ ಮಾಡಿ ಬಿಗಿಹಿಡಿತದಲ್ಲಿಟ್ಟುಕೊಳ್ಳುವುದು, ಯಾವ ಕಾರಣಕ್ಕೂ ಅನಂತಕುಮಾರ್ ಕೈಮೇಲಾಗದಂತೆ ನೋಡಿಕೊಳ್ಳುವುದು.

ಆದರೆ ಕ್ರಿಯಾಶಿಲ ವ್ಯಕ್ತಿಯೊಬ್ಬನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಆ ಬೆಂಬಲವೊಂದಿದ್ದರೆ ಸಾಕು ಸಾವಿರ ಮೊಕದ್ದಮೆಗಳನ್ನು ಲೀಲಾಜಾಲವಾಗಿ ಎದುರಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ ನಮ್ಮ ನೆರೆ ರಾಜ್ಯದ ಮುಖ್ಯಮಂತ್ರಿ ಜಯಲಲಿತ. ಜಯಲಲಿತ ವಿರುದ್ಧ ಅಕ್ರಮ ಆಸ್ತಿಗಳಿಕೆಯ ಮೊಕದ್ದಮೆ ೧೧೮adjournment ಗಳ ನಂತರವೂ ಎರಡು ದಶಕಗಳಿಂದ ಅಭಾದಿತವಾಗಿ ನಡೆಯುತ್ತಲೆ ಇದ್ದು ಜಯಲಲಿತ ಮತ್ತೆ ಮತ್ತೆ ಅಧಿಕಾರಕ್ಕೇರುತ್ತಲೇ ಬಂದಿದ್ದಾರೆ.

ಆದರೆ ಯಡಿಯೂರಪ್ಪನವರ ಶತ್ರು ಅಂತ ಯಾರಾದರೂ ಇದ್ದರೆ ಅದು ಅವರೆ. ಅವರ ಮುಂಗೋಪ, ಸಿಟ್ಟು ಸೆಡವು, ಅಹಂಕಾರ, ಛಲದ ಮುಂದೆ ಯಾವುದೇ ತರ್ಕವಾಗಲಿ, ಸಿದ್ಧಾಂತವಾಗಲಿ ನಿಲ್ಲುವುದಿಲ್ಲ ಎನ್ನುತ್ತಾರೆ ತಿಳಿದವರು. ಇವರೊಂದು ರೀತಿಯಲ್ಲಿ ಬಿಜೆಪಿಯ ದೇವೇಗೌಡರು. ಪ್ರಧಾನ ಮಂತ್ರಿ ಗದ್ದುಗೆಗೇರಿದರು ಗ್ರಾಮ ಪಂಚಾಯತಿಯ ರಾಜಕಾರಣವನ್ನು ಹೇಗೆ ಬಿಡಲಿಲ್ಲವೋ ಹಾಗೆಯೇ ವೈಯಕ್ತಿಕ ದ್ವೇಷ ಅಸೂಯೆಗಳನ್ನು ಯಾವ ಕಾರಣಕ್ಕೂ ಮೆಟ್ಟಿ ನಿಲ್ಲುವವರಲ್ಲ ಯಡಿಯೂರಪ್ಪ. ತಮ್ಮ ಗುಂಪಿನ ವಿರುದ್ಧ ಮತ ಹಾಕಿದ ಅನಾರೋಗ್ಯ ಪೀಡಿತ ಶಾಸಕ ಈಶಣ್ಣ ಗುಳಗಣ್ಣನವರ್ ಅವರಿಗೆ ಧಮಕಿ ಹಾಕಿದ ಪ್ರಸಂಗ, ಯಡಿಯೂರಪ್ಪ ಏನೂ ಬದಲಾಗಲಿಲ್ಲ, ಅದೇ ಯಡಿಯೂರಪ್ಪ ಆಗಿಯೇ ಮುಂದುವರಿಯುತ್ತಿದ್ದಾರೆ ಎಂಬ ಬಾವನೆಗೆ ಪುಷ್ಟಿಕೊಡುವಂತಿದೆ. ಹೀಗಾದರೆ ಅದು ಕೇವಲ ಅವರ ವೈಯಕ್ತಿಕ ದುರಂತವಷ್ಟೇ ಅಲ್ಲ ಈ ರಾಜ್ಯದ ದುರಂತವೂ ಆಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ