ಶುಕ್ರವಾರ, ಆಗಸ್ಟ್ 19, 2011

My latest article on Anna Hajare movement at www.kendasampige.com

ಸರ್ಕಾರಿ ಲೋಕಪಾಲ VS ಜನಲೋಕಪಾಲ:ಸಿದ್ದಾರ್ಥ ವ್ಯಾಖ್ಯಾನ
ಸಿದ್ಧಾರ್ಥ
ಶುಕ್ರವಾರ, 19 ಆಗಸ್ಟ್ 2011 (03:28 IST)

ರಾಷ್ಟ್ರದ ರಾಜಧಾನಿ ದೆಹಲಿಯಲ್ಲೀಗ ಗೊಂದಲ ಪರ್ವ. ಒಂದೇ ಸಮನೆ ಸುರಿಯುತ್ತಿರುವ ಮಳೆಯಲ್ಲೂ ಹಗರಣಗಳ ಬಿಸಿ, ಪ್ರತಿಭಟನೆಗಳ ಕಾವು ದೆಹಲಿಗರನ್ನು ಸುಡುತ್ತಲಿದೆ. ಕಾಮನ್‌ವೆಲ್ತ್ ಕ್ರೀಡೆಗಳ ಕುರಿತ ಸಿಎಜಿ ವರದಿ ಬಂದಾಯ್ತು, ಸಂಸತ್‌ಗೆ ಅಧಿಕೃತವಾಗಿ ಮಂಡನೆಯಾಗುವ ಮೊದಲೇ ಅದು ದೆಹಲಿಯ ಪತ್ರಿಕೆಗಳಲ್ಲಿ, ಫೇಸ್ ಬುಕ್‌ಗಳಲ್ಲಿ ರಾರಾಜಿಸುತ್ತಿತು, (ಹೀಗೂ ಓದಿಕೊಳ್ಳಿ-ಕರ್ನಾಟಕ-ಲೋಕಾಯುಕ್ತ ವರದಿ-ಯಡಿಯೂರಪ್ಪ). ಸಿಎಜಿ ವಿನೋದ ರಾಮ್ ಭವಿಷ್ಯದ ಟಿಎನ್ ಚತುರ್ವೇದಿ ಆಗಲು ಹೊರಟಿದ್ದಾರೆಂಬ ಅಭಿಪ್ರಾಯಗಳು ಕೇಳಿಬಂದವು. ಸಿಎಜಿಯ ಬಹುಪಾಲು ಆರೋಪಗಳು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹಾಗೂ ಪ್ರದಾನಿಯತ್ತಲೇ ಗುರಿಯಾಗಿದ್ದು ಅವರ ಅವಹೇಳನಕ್ಕೆ ಬಿಜೆಪಿ ಸಂಸತ್‌ನ್ನು ಸಮರ್ಥವಾಗಿ ಬಳಸಿಕೊಂಡಿತು. ಈ ಬಾರಿ ಸಂಸತ್ ಆರಂಭಗೊಂಡಾಗಿನಿಂದ ಒಂದು ದಿನವೂ ಪೂರ್ಣಕಾಲ ಅಧಿವೇಶನ ನಡೆದಿಲ್ಲ. (ಹೇಗಾದರೂ ಮಾಡಿ ಸಂಸತ್‌ನಲ್ಲಿ ಪ್ರತಿ ದಿನವೂ ಗದ್ದಲವೆಬ್ಬಿಸಿ ಸದನ ಮುಂದೂಡುವಂತೆ ಮಾಡಬೇಕೆಂದು ಬಿಜೆಪಿ ಸಂಸದೀಯ ಮಂಡಳಿಯ ಮೇಲೆ ವಿವಿಧ ರಾಜ್ಯ ಘಟಕಗಳು ಒತ್ತಾಯಿಸುತ್ತಿವೆ ಎಂದು ಅಲವತ್ತ್ತುಕೊಂಡಿರುವುದು ಸಾಕ್ಷಾತ್ ಸುಷ್ಮಾಸ್ವರಾಜ್. ವಿವರ ಬೇಕಿದ್ದರೆ ಓದಿ, ಹಿಂದೂ ಆಗಸ್ಟ್ ೧೨, ೨೦೧೧) ಇದರಿಂದ ಸದನದ ಕಲಾಪ ವ್ಯರ್ಥವಾಗಿ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ಅಪವ್ಯಯ ನಡೆಯುತ್ತಿದೆ. ಎಂಬ ಸಂಗತಿಯನ್ನು ನಿಮ್ಮ ವಿವೇಚನೆಗೆ ಬಿಡುತ್ತೇನೆ. ನಡೆದ ಕೆಲವೇ ಘಂಟೆಗಳ ಚರ್ಚೆ ಕಾಲದಲ್ಲಿ ಯಡಿಯೂರಪ್ಪ ಹಾಗೂ ಶೀಲಾ ದೀಕ್ಷೀತ್ ಅವರ ಕಂಪಾರೀಸನ್ ಕೂಡ ಸಾಕಷ್ಟು ಧಾರಾಳವಾಗಿ ಪ್ರಸ್ತಾಪವಾಯಿತು.

ಸಿಎಜಿ ವರದಿಯನ್ನು ಬಿಜೆಪಿ ರಾಜಕೀಯ ದಾಳವಾಗಿ ಹೇಗೆ ಬಳಸಿಕೊಂಡಿತು ಎಂಬ ಬಗ್ಗೆ ಸಾಕಷ್ಟು ಪತ್ರಿಕೆಗಳಲ್ಲಿ ವರದಿಯಾಗಿರುವುದರಿಂದ ನಾನದರ ವಿಶ್ಲೇಷಣೆಯ ಗೋಜಿಗೆ ಹೋಗದೆ ಒಂದೇ ಒಂದು ಅಂಶವನ್ನು ಇಲ್ಲಿ ಪ್ರಸ್ತಾಪಿಸ ಬಯಸುತ್ತೇನೆ. ಕಾಮನ್‌ವೆಲ್ತ್ ಕ್ರೀಡೆಯ ಸೂರೆಯಲ್ಲಿ ಹಲ ಪತ್ರಕರ್ತರೂ, ಕೆಲ ಪತ್ರಿಕಾ ಮಾಧ್ಯಮಗಳೂ ಸಾಕಷ್ಟು ಪ್ರಯೋಜನ ಪಡೆದರೆಂಬ ಸಂಗತಿ ಸಿಎಜಿ ವರದಿಯಲ್ಲಿ ಬಯಲಾಗಿದೆ. ಉದಾಹರಣೆಗೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ಕ್ರೀಡೆ ಕುರಿತ ವೆಬ್ ಸೈಟ್ ರೂಪಿಸಿ, ಕ್ರೀಡಾವಳಿಯ ವಿವರಗಳನ್ನು ಅಪ್ ಡೇಟ್ ಮಾಡುವ ಕಂಟ್ರಾಕ್ಟ್ ನೀಡಲಾಗಿತ್ತು. ಹಾಗೆಯೇ ವಾಣಿಜ್ಯ ಜಾಹಿರಾತುಗಳನ್ನು ರೂಪಿಸುವ ಹೊಣೆಗಾರಿಕೆಯನ್ನು ಎನ್‌ಡಿ ಟಿವಿ ಹಾಗೂ ಸಿಎನ್‌ಎನ್-ಐಬಿಎನ್ ಸಂಸ್ಥೆಗಳಿಗೆ ನೀಡಿತ್ತು. ನಿರೀಕ್ಷಿತ ಸೇವೆ ಸಲ್ಲಿಸಲು ಈ ಎಲ್ಲ ಸಂಸ್ಥೆಗಳು ವಿಫಲವಾಯಿತಾದರೂ ಸಂಭಾವನೆಯ ರೂಪದಲ್ಲಿ ಹಲವಾರು ಕೋಟಿ ರೂಪಾಯಿ ದುರುಪಯೋಗವಾಯಿತು.
ಸಿಎಜಿ ವರದಿಯನ್ನು ಸಂಸತ್‌ನಲ್ಲಿ ಜಾಲಾಡಿದ ರಾಜಕಾರಣಿಗಳು, ಪತ್ರಿಕೆಗಳು, ರಾಷ್ಟ ಮಟ್ಟದ ಮಾಧ್ಯಮಗಳಲ್ಲಿ ಮಾಧ್ಯಮ ಲೋಕದ ಈ ಹಂಗಾಮ ಬೆಳಕಿಗೆ ಬಾರದಂತೆ ಹೇಗೆ ಮುಚ್ಚಿ ಹೋಯಿತು ಎಂಬುದನ್ನು ಬಲ್ಲವರೇ ಹೇಳಬೇಕು. ಈ ವಿಷಯವನ್ನು ಇಲ್ಲಿಯೇ ಬಿಟ್ಟು ಪ್ರಸಕ್ತ ವಿದ್ಯಮಾನಗಳತ್ತ ಬರುತ್ತೇನೆ.

ಯುಪಿಎ ಸರ್ಕಾರ ತಾನು ವಾಗ್ದಾನ ಮಾಡಿದ್ದಂತೆ ಇದೇ ಮಳೆಗಾಲದ ಅಧಿವೇಶನದಲ್ಲಿ ಲೋಕಪಾಲ ಮಸೂದೆಯನ್ನು ಮಂಡಿಸುವಲ್ಲಿ ಯಶಸ್ವಿಯಾಯಿತು. ತಮ್ಮದೇ ಜನಲೋಕಪಾಲ ಮಸೂದೆ ಜಾರಿಯಾಗಬೇಕು ಎಂದು ಒತ್ತಾಯಿಸುತ್ತಾ ಬಂದಿರುವ ಅಣ್ಣಾ ಹಜಾರೆ ಸರ್ಕಾರಿ ಮಸೂದೆಯ ಪ್ರತಿಯನ್ನು ಸುಟ್ಟು ಹಾಕಿ ಪ್ರತಿಭಟಿಸಿದ್ದೇ ಅಲ್ಲದೇ, ಇದೀಗ ನಿರಶನದ ಹಾದಿಯನ್ನು ಹಿಡಿದಿದ್ದಾರೆ. ತೀರಾ ತಿಳಿಗೇಡಿಯಂತೆ ವರ್ತಿಸಿದ ಕೇಂದ್ರ ಸರ್ಕಾರ ಹಜಾರೆ ಅವರನ್ನು ಬಂಧಿಸುವ ಮೂಲಕ ಮತ್ತಷ್ಟು ರಾಡಿಯನ್ನು ತನ್ನ ಮುಖದ ಮೇಲೆ ಎರಚಿಕೊಂಡಿದೆ. ರಾಷ್ಟ್ರವ್ಯಾಪಿ ದಿನವಿಡೀ ಸುದ್ದಿ ಹರಡುತ್ತಿರುವ ೨೪x೭ ಛಾನಲ್‌ಗಳ ಕೃಪೆ-ಅಣ್ಣಾ ಅವರ ಪರವಾಗಿ ಪ್ರತಿಭಟನೆ ಪ್ರದರ್ಶನಗಳು ತೇಜಿಯಿಂದ ನಡೆಯುತ್ತಿವೆ. ಇದೊಂದು ಕಿಂದರಿಜೋಗಿಯ ಕಥೆಯಾಗುತ್ತಿದ್ದು ಅಂತ್ಯದಲ್ಲಿ ಬಲಿಯಾಗುವವರು ಯಾರಾಗಬಹುದು ಎಂಬ ವಿಶ್ಲೇಷಣೆಗೆ ಸದ್ಯಕ್ಕೆ ನಾನು ಹೋಗದೆ ಲೋಕಪಾಲ ಮಸೂದೆ ನಡೆದುಬಂದ ದಾರಿಯತ್ತ ಕಣ್ಣು ಹಾಯಿಸುತ್ತೇನೆ.

ಇಂಗ್ಲೆಂಡಿನಲ್ಲಿ ಒಂಬುಡ್ಸ್‌ಮನ್ (Ombudsman)ಇರುವ ರೀತಿಯಲ್ಲಿ ರಾಷ್ಟ್ರಕೊಬ್ಬರು ಲೋಕಪಾಲರಿರಬೇಕೆಂಬ ಅಗತ್ಯವನ್ನು ೧೯೬೩ ರಲ್ಲಿಯೇ ಕಂಡುಕೊಳ್ಳಲಾಯಿತು.
೧೯೬೬ ರಲ್ಲಿ ಕೆಂಗಲ್ ಹನುಮಂತಯ್ಯ ಅವರ ಅಧ್ಯಕ್ಷತೆಯ ಆಡಳಿತ ಸುದಾರu ಸಮಿತಿ(Administative Reforms Commission)ಆಡಳಿತಾಂಗದಲ್ಲಿ ಭ್ರಷ್ಟಾಚಾರ ನಿವಾರಣೆಗೆ ರಾಷ್ಟ್ರ ಮಟ್ಟದಲ್ಲಿ ಲೋಕಪಾಲ, ರಾಜ್ಯ ಮಟ್ಟದಲ್ಲಿ ಲೋಕಾಯುಕ್ತ ಸಂಸ್ಥೆಗಳ ರಚನೆಗೆ ಶಿಪಾರಸ್ಸು ಮಾಡಿತ್ತು.

ಮೊದಲನೆಯ ಲೋಕಪಾಲ ಮಸೂದೆಯನ್ನು ಇದೇ ಇಂದು ಅಣ್ಣಾ ಟೀಂ ನಲ್ಲಿ ಸಕ್ರಿಯರಾಗಿರುವ ಅಂದಿನ ಕಾನೂನು ಸಚಿವ ಶಾಂತಿಭೂಷಣ್ ಅವರಿಂದಲೇ ೧೯೬೮ರಲ್ಲಿ ಮಂಡಿಸಲಾಗಿತ್ತು. ಅದು ಆಗ ಲೋಕಸಭೆಯಲ್ಲಿ ಅಂಗೀಕಾರ ಪಡೆಯಿತಾದರೂ, ರಾಜ್ಯಸಭೆಯಲ್ಲಿ ರಿಜೆಕ್ಟ್ ಆಯಿತು. ತದನಂತರ ೧೯೭೧, ೧೯೭೭, ೧೯೮೫, ೧೯೮೯, ೧೯೯೬, ೧೯೯೮ ಹಾಗೂ ೨೦೦೧ ರಲ್ಲಿ ಲೋಕಪಾಲ ಮಸೂದೆ ಮಂಡಿತವಾಗಿತ್ತು. ೨೦೦೧, ೧೯೯೮ ಹಾಗೂ ೧೯೯೬ ರಲ್ಲಿ ಮೂರು ಬಾರಿ ಮಸೂದೆಯನ್ನು ಜಂಟೀ ಸಲಹ ಸಮಿತಿಗಳ ಪರಿಶೀಲನೆಗೆ ಒಪ್ಪಿಸಲಾಯಿತು.

ಈ ಮದ್ಯೆ ೧೯೮೩ರಲ್ಲಿ ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಬಂದ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ಲೋಕಾಯುಕ್ತ ಮಸೂದೆಯನ್ನು ಹುಟ್ಟುಹಾಕಿ ಹೊಸ ಇತಿಹಾಸಕ್ಕೆ ನಾಂದಿ ಹಾಕಲಾಯಿತು. (ಆನಂತರ ಇದೇ ಲೋಕಾಯುಕ್ತ ಸಂಸ್ಥೆಯನ್ನು ಹೆಗಡೆ ಅವರ ರಾಜಕೀಯ ವಿರೋಧಿ ದೇವೇಗೌಡರನ್ನು ಬಲಿ ಹಾಕಲು ಬಳಸಿಕೊಳ್ಳಲಾಯಿತು. ಆ ಮಾತು ಬೇರೆ)

ಮೇಲೆ ಹೇಳಿದಂತೆ ೧೯೬೮ರಿಂದ ೨೦೦೧ರ ತನಕ ೩೩ ವರ್ಷಗಳ ಅವದಿಯಲ್ಲಿ ೮ ಬಾರಿ ಲೋಕಪಾಲ ಮಸೂದೆ ಮಂಡಿಸಲಾಯಿತಾದರೂ ನಾನಾ ಕಾರಣಗಳಿಂದಾಗಿ ಅವು ಕಾಯ್ದೆಯಾಗಲಿಲ್ಲ.

೨೦೦೨ ಅಂದಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಿಂದ ರಚನೆಯಾದ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲ ಸಂವಿಧಾನ ತಿದ್ದುಪಡಿ ಪರಿಶೀಲನಾ ಸಮಿತಿ ರಾಷ್ಟ್ರ ಮಟ್ಟದಲ್ಲಿ ಲೋಕಪಾಲ ಸಂಸ್ಥೆ ಸ್ಥಾಪನೆಗೆ ಶಿಫಾರಸ್ಸು ಮಾಡಿತ್ತು. ಅಲ್ಲದೆ ಉದ್ದೇಶಿತ ಮಸೂದೆಯ ವ್ಯಾಪ್ತಿಯಿಂದ ಪ್ರಧಾನ ಮಂತ್ರಿ ಹುದ್ದೆಯನ್ನು ದೂರ ಇಡಬೇಕೆಂದು ಹೇಳಿತ್ತು.
೨೦೦೫ರಲ್ಲಿ ವೀರಪ್ಪಮೋಯ್ಲಿ ನೇತೃತ್ವದ ಆಡಳಿತ ಸುಧಾರಣಾ ಆಯೋಗ ಕೂಡ ಲೋಕಪಾಲ ಸಂಸ್ಥೆ ಆರಂಭಕ್ಕೆ ಒತ್ತಾಯಿಸಿತ್ತು. ೨೦೦೯ ಲೋಕಸಭಾ ಚುನಾವಣೆಯಲ್ಲಿ ಯುಪಿಎ ತನ್ನ ಚುನಾವಣೆ ಪ್ರನಾಳಿಕೆಯಲ್ಲಿ ಲೋಕಪಾಲ ಮಸೂದೆ ಮಂಡನೆಗೆ ವಿಶೇಷ ಒತ್ತು ನೀಡಿತ್ತು.

ರಾಷ್ಟ್ರದಲ್ಲಿ ವ್ಯಾಪಕವಾಗಿ ಕಪ್ಪುಹಣ ಚಾಲನೆಯಲ್ಲಾಗುವ ಬಗ್ಗೆ, ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರನೇಕರು ಬಿಲಿಯನ್ ಗಟ್ಟಲೆ ಲೆಕ್ಕರಹಿತ ಹಣ ಇಟ್ಟಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದ್ದಂತೆ, ಅದು ವ್ಯಾಪಕವಾಗಿ ಚಳುವಳಿಯ ಸ್ವರೂಪ ಪಡೆಯಲಾರಂಬಿಸಿತು. ಹಲವರ ಸ್ವಯಂ ಘೋಷಿತ ನಾಯಕರುಗಳೂ ಹುಟ್ಟಿಕೊಂಡರು.
ದೇಶ ವಿದೇಶಗಳಲ್ಲಿ ತನ್ನ ಯೋಗ ಪ್ರದರ್ಶನದಿಂದ ಸಾವಿರಾರು ಕೋಟಿ ರೂಪಾಯಿಗಳನ್ನು, ಡೆಹ್ರಾಡೂನ್ ಪರ್ವತ ಪ್ರದೇಶದಲ್ಲಿ ಸಾವಿರಾರು ಎಕರೆ ಭೂಮಿಯನ್ನು ಗುಡಿಸಿ ಗುಡ್ಡೆ ಹಾಕಿಕೊಂಡ ಬಾಬಾ ರಾಂದೇವ್ ಇಂತಹ ನಾಯಕರಲ್ಲಿ ಒಬ್ಬರು. ಮತ್ತೊಬ್ಬರು ರಾಲೇಗಾಂ ಸಿದ್ದಿ ಎಂಬ ಸಣ್ಣ ಗ್ರಾಮದಿಂದ ಬಂದ ಮಾಜಿ ಸೈನಿಕರು ಕಿಶನ್ ಬಾಬೂರಾವ್ ಅಲಿಯಾಸ್ ಅಣ್ಣಾ ಹಜಾರೆ. ಇವರೊಂದಿಗೆ ಕೈ ಜೋಡಿಸಿದವರು ವೃತ್ತಿಯಲ್ಲದ ಕಾರಣಕ್ಕಾಗಿ ಸದಾ ಸುದ್ದಿಯಲ್ಲಿದ್ದ ಮಾಜಿ ಪೊಲೀಸ್ ಅಧಿಕಾರಿಣಿ ಕಿರಣ್ ಬೇಡಿ, ಆರ್.ಟಿ.ಐ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಸ್ವಯಂ ಶ್ರೀ ಶಾಂತಿಭೂಷಣ್ ಮತ್ತವರ ಮಗ ನ್ಯಾಯವಾದಿ ಪ್ರಶಾಂತ್ ಭೂಷಣ್. ಜೊತಗೆ ನಮ್ಮ ಸ್ಥಳೀಯರಾದ ಈಗ ಮಾಜಿ ಆದ ಸಂತೋಷ್ ಹೆಗಡೆ ರವರು. (ಇಂದು ವ್ಯಾಪಕವಾಗಿ ಬಳಕೆಯಾಗುತ್ತಿರುವ ಮಾಹಿತಿ ಹಕ್ಕು ಕಾಯ್ದೆಯನ್ನು ರೂಪಿಸಿ ಜಾರಿಗೆ ತಂದದ್ದು ಯುಪಿಎ ಸರ್ಕಾರವೇ ಎಂಬ ಸಂಗತಿಯನ್ನು ಈಗ ಯಾರೂ ಏಕೆ ಸ್ಮರಿಸಿಕೊಳ್ಳಲು ಒಲ್ಲರೋ ತಿಳಿಯದಾಗಿದೆ.)

ಹಲವಾರು ಪ್ರತಿಭಟನೆ ಆಂದೋಲನಗಳ ತರುವಾಯ ಅಣ್ಣಾ ಹಜಾರೆ ಟೀಂ ದೆಹಲಿಯ ರಾಜ್‌ಘಾಟ್‌ನಲ್ಲಿ ಪ್ರಥಮ ಭಾರಿಗೆ ಉಪವಾಸ ಕೈಗೊಂಡಿತ್ತು. ೭ ದಿನಗಳ ಈ ನಿರಶನಕ್ಕೆ ಮಣಿದ ಕೇಂದ್ರ ಸರ್ಕಾರ ಲೋಕಪಾಲ ಮಸೂದೆ ಜಾರಿಗೆ ತರುವುದಾಗಿ ಪ್ರಕಟಿಸಿತು. ಸರ್ಕಾರ ಹಾಗೂ ಸಿವಿಲ್ ಸೊಸೈಟಿ (ಅಣ್ಣಾ ಟೀಂ ಅನ್ನು ಈಗ ಈ ಹೆಸರಿನಿಂದ ಗುರುತಿಸಲಾಗುತ್ತಿದೆ.) ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಿ ಅದಕ್ಕೆ ಪ್ರಣವ್ ಮುಖರ್ಜಿಯವರ ನಾಯಕತ್ವ ನೀಡಲಾಯಿತು.

ಸಿವಿಲ್ ಸೊಸೈಟಿ ಸದಸ್ಯರ ವಿಚಿತ್ರ ಬೇಡಿಕೆಗಳ ನಡುವೆಯೂ ಸಮಿತಿ ತನ್ನ ಕಲಾಪ ನಡೆಸಿತು. ಸಮಿತಿ ರಚಿಸಿದ ವರದಿ ಅಣ್ಣಾ ಟೀಂಗೆ ಒಪ್ಪಿಗೆಯಾಗಲಿಲ್ಲ. ಅದು ತನ್ನದೇ ಆದ ಜನಲೋಕಪಾಲ ಮಸೂದೆಯನ್ನು ಸಿದ್ಧಗೊಳಿಸಿ ಅದನ್ನೇ ಅಂತಿಮ ಕಾಯ್ದೆಯನ್ನಾಗಿ ಒಪ್ಪಬೇಕೆಂದು ಒತ್ತಾಯಿಸಿತು.

ಹೀಗೆ ಸರ್ಕಾರಿ ಲೋಕಪಾಲ ಹಾಗೂ ಜನಲೋಕಪಾಲ ಎರಡು ಪ್ರತ್ಯೇಕ ವರದಿಗಳು ಸಿದ್ದಗೊಂಡು ಸಮಿತಿಯ ಉದ್ದೇಶ ವಿಫಲಗೊಂಡಿತ್ತು.

ಸರ್ವಸಮ್ಮತ ಮಸೂದೆಯನ್ನು ರೂಪಿಸುವುದು ಸಮಿತಿಗೆ ಅಸಾದ್ಯವಾಗಿ, ಅಂತಿಮವಾಗಿ ಸರ್ಕಾರ ತನ್ನದೇ ಆದ ಮಸೂದೆಯನ್ನು ಸದನದಲ್ಲಿ ಮಂಡಿಸುವ ಮೂಲಕ ಒಂದು ಘಟ್ಟ ಮುಗಿದು ಮತ್ತೊಂದರ ಆರಂಭವಾಯಿತು.

ನಿರೀಕ್ಷಿಸಿದಂತೆ ಉಗ್ರ ಪ್ರತಿಕ್ರಿಯೆ ಬಂದಿದ್ದು ಟೀಂ ಅಣ್ಣಾ ತಂಡದಿಂದ. ಸರ್ಕಾರಿ ಲೋಕಪಾಲ ವರದಿಯ ಪ್ರತಿಯನ್ನು ಬಹಿರಂಗವಾಗಿ ಸುಟ್ಟು ಹಾಕಿದ ಗಾಂಧಿ ವಾದಿ ಜನಲೋಕಪಾಲ ಮಸೂದೆಯನ್ನು ಯಥಾವತ್ ಅಂಗೀಕರಿಸದಿದ್ದರೆ ತಾವು ಅಮರಣಾಂತ ಉಪವಾಸ ಹೂಡುವ ನಿರ್ಧಾರವನ್ನು ಪುನರುಚ್ಚರಿಸಿದರು.

೨೦೦೩ ರಲ್ಲಿ ಲೋಕಪಾಲ ವ್ಯಾಪ್ತಿಯಿಂದ ಪ್ರಧಾನಿ ಹುದ್ದೆಯನ್ನು ದೂರವಿಡಬೇಕೆಂದು ಪ್ರತಿಪಾದಿಸಿದ್ದ ಬಿಜೆಪಿ ಈ ಬಾರಿ ತನ್ನ ದನಿಯನ್ನೇ ಬದಲಿಸಿತು.

ಲೋಕಪಾಲ ಮಸೂದೆ ಬ್ರಷ್ಟಾಚಾರ ವಿರೋಧಿಯಾಗಿದ್ದು ಅದರ ನಿರ್ಮೂಲನೆಗೆ ಸಹಕಾರಿಯಾಗುವ ಅಂಶಗಳನ್ನು ಒಳಗೊಂಡಿರಬೇಕೆಂಬುದು ಎಲ್ಲರ ನಿರೀಕ್ಷೆ. ಸರ್ಕಾರಿ ಮಸೂದೆಯಲ್ಲಿ ಈ ಉದ್ದೇಶ ಎಷ್ಟರ ಮಟ್ಟಿಗೆ ಈಡೇರಿದೆ ಎಂಬುದು ಚರ್ಚೆಯ ಸಂಗತಿಯಾಗಬೇಕು. ಆದರೆ ಮಸೂದೆ ಧಲಿತ ವಿರೋಧಿ, ಬಡ ಜನರ ವಿರೋಧಿ ಯಾಗಿದೆ ಎಂದು ಅಣ್ಣಾ ಟೀಂ ಆರೋಪಿಸುತ್ತಿದೆ.

ವಾಸ್ತವವಾಗಿ ನೋಡಿದರೆ ಸರ್ಕಾರಿ ಲೋಕಪಾಲ, ಜನ ಲೋಕಪಾಲ ಎರಡು ಮಸೂದೆಗಳ ಒಳ ಉದ್ದೇಶ ಒಂದೇ ಆಗಿದೆ. ಅದು ಸರ್ಕಾರಿ ಭಾಷೆಯಲ್ಲಿದ್ದರೆ ಇದು ಭಾವನಾತ್ಮಕ ಭಾಷೆಯಲ್ಲಿದೆ.

ಸರ್ಕಾರಿ ಮಸೂದೆ ಪ್ರಧಾನಿ, ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಸಂಸತ್ ಸದಸ್ಯರ ಕೃತ್ಯಗಳು ಹಾಗೂ ಉನ್ನತ ನ್ಯಾಯಾಂಗವನ್ನು ಮಸೂದೆ ವ್ಯಾಪ್ತಿಯಿಂದ ಹೊರಗಿಟ್ಟರೆ, ಈ ಮೂರನ್ನು ಸೇರಿಸಲೇ ಬೇಕೆಂದು ಆಗ್ರಹಿಸುತ್ತದೆ ಜನಲೋಕಪಾಲ. ವಿಷಲ್ ಬ್ಲೋಯರ್ (Wistle Blowers)ಗಳೆಂಬ ಹಣೆಪಟ್ಟಿಯಡಿ ಮಾಹಿತಿದಾರರಿಗೆ ವಿಶೇಷ ಹಕ್ಕು, ಸವಲತ್ತು, ರಕ್ಷಣೆ ಹಾಗೂ ಹಣವನ್ನು ನೀಡಲು ಜನಲೋಕಪಾಲ ಬಯಸಿದರೆ, ಸುಳ್ಳು ಮಾಹಿತಿ ನೀಡಿದ್ದು ಸಾಬೀತಾದರೆ ಮಾಹಿತಿ ದಾರರಿಗೆ ಶಿಕ್ಷೆ ವಿಧಿಸುವ ಮಾತಾಡುತ್ತದೆ ಸರ್ಕಾರಿ ಲೋಕಪಾಲ. ಲೋಕಪಾಲರನ್ನು ಆರಿಸಲೆಂದೆ ಒಂದು ಶೋಧನಾ ಸಮಿತಿ ಇರಬೇಕು (Search Commitee)ಅದು ನೀಡುವ ಹೆಸರುಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ ಮುಖ್ಯ ನ್ಯಾಯಾಧೀಶರ ನೇತೃತ್ವದ ಆಯ್ಕೆ ಸಮಿತಿ ಇರಬೇಕು. ಜನಲೋಕಪಾಲ ಬಯಕೆ. ಈ ಎಲ್ಲಾ ಕಾರ್ಯಹೊಣೆಯನ್ನು ಪ್ರಧಾನಿ ಮಂತ್ರಿ ನೇತೃತ್ವದ ಆಯ್ಕೆ ಸಮಿತಿಯೇ ಮಾಡಲಿ ಎನ್ನುತ್ತದೆ ಸರ್ಕಾರಿ ಲೋಕಪಾಲ. ಸ್ವಯಂ ಲೋಕಪಾಲರನ್ನು ಡಿವೈಎಸ್‌ಪಿ ಧರ್ಜೆಗೆ ಕಡಿಮೆಯಲ್ಲದ ಪೊಲೀಸ್ ಅಧಿಕಾರಿಗಳನ್ನು ಗುರುತಿಸಿ ಅವರಿಗೆ (search, seizur) ಮಾಡುವ ಅಧಿಕಾರವಿರಬೇಕು. (ಊಹಿಸಿಕೊಳ್ಳಿ-ಲೋಕಪಾಲ ಸಂತೋಷ್ ಹೆಗಡೆಯವರು ಭ್ರಷ್ಟ ಯಡಿಯೂರಪ್ಪನ ಮನೆಗೆ ನುಗ್ಗಿ ಶೋಧನೆ ನಡೆಸುವ ದೃಶ್ಯವನ್ನು) ಎಂದು ಜನಲೋಕಪಾಲ ಬಯಸಿದರೆ, ಲೋಕಪಾಲ ಅಧೀನದಲ್ಲಿರುವ ಪೊಲೀಸ್ ವ್ಯವಸ್ಥೆಗೆ ವ್ಯಾಪಕ ಅಧಿಕಾರ ನೀಡಲಿದೆ ಸರ್ಕಾರಿ ಲೋಕಪಾಲ. ಲೋಕಪಾಲರನ್ನು ತೆಗೆಯಲು ಸುಪ್ರೀಂಕೋರ್ಟಿಗೆ ಮಾತ್ರ ಅಧಿಕಾರ ಎನ್ನುತ್ತದೆ ಜನಲೋಕಪಾಲ. ಇಲ್ಲ, ಕೇಂದ್ರ ಸರ್ಕಾರವೇ ಅಂತಿಮ ಎನ್ನುತ್ತದೆ ಸರ್ಕಾರ. ರಾಷ್ಟ್ರದ ಒಟ್ಟು ವರ್ಷಾದಾಯದಲ್ಲಿ ಶೇ. ಅರ್ಧ ಪೈಸೆ ತನ್ನ ಖರ್ಚಿಗೆ ಬೇಕು ಎನ್ನುತ್ತದೆ ಜನಲೋಕಪಾಲ. ರಾಷ್ಟ್ರದ ಸಂಚಿತ ನಿಧಿಯಿಂದ (consolidated fund) ಎಷ್ಟೂ ಬೇಕಾದರೂ ಕೊಡಲು ಸಿದ್ದ ಎನ್ನುತ್ತದೆ ಸರ್ಕಾರಿ ಲೋಕಪಾಲ. ಪೋನ್ ಕದ್ದಾಲಿಕೆಯ ಅಧಿಕಾರ ಲೋಕಪಾಲರಿಗೆ ಇರಲಿ ಎಂದು ಜನಲೋಕಪಾಲ ಬಯಸಿದರೆ, ಇಲ್ಲ ಅದು ಗೃಹ ಕಾರ್ಯದರ್ಶಿಗಳಿಗೇ ದತ್ತವಾಗಿರಲಿ ಎನ್ನುತ್ತದೆ ಸರ್ಕಾರಿ ಲೋಕಪಾಲ.

ಈ ಬೇಕು ಬೇಡಗಳ ಪಟ್ಟಿಯನ್ನು ಮತ್ತಷ್ಟು ಲಂಬಿಸದೆ ಮುಂದಿನ ವಿದ್ಯಮಾನಗಳತ್ತ ತೆರಳಲು ತಮ್ಮ ಅನುಮತಿಯನ್ನು ಬಯಸುತ್ತೇನೆ. (ಜನಲೋಕಪಾಲ ಹಾಗೂ ಸರ್ಕಾರಿ ಲೋಕಪಾಲ ಎರಡೂ ಮಸೂದೆಗಳು ಕೆಂಡ ಸಂಪಿಗೆಯ ಸಂಪಾzಕರಲ್ಲಿ ಲಬ್ಯವಿರುತ್ತದೆ. ಓದುಗರು ಅಧ್ಯಯನ ಮಾಡಲು ಬಯಸಿದ್ದಲ್ಲಿ ಮಿಂಚಂಚೆಯ ಮೂಲಕ ಪಡೆದುಕೊಳ್ಳಬಹುದು)
ಮೊದಲೇ ಹೇಳಿದಂತೆ ತಾವು ಮುಂದಿಟ್ಟಿದ್ದ ಮಸೂದೆಯನ್ನು ತಿರಸ್ಕರಿಸಿ ಸರ್ಕಾರಿ ಮಸೂದೆಯನ್ನು ಸಧನದಲ್ಲಿ ತರುವ ಧೈರ್ಯವನ್ನು ತೋರಿದ್ದಕ್ಕಾಗಿ ಅಣ್ಣಾ ಹಜಾರೆ ಎಂಬ ಗಾಂಧಿ ಮಹಾತ್ಮ ಕಿಡಿ ಕೆಂಡವಾಗಿದ್ದಾರೆ.

ಸರ್ಕಾರಿ ಮಸೂದೆಯ ಬಹು ಮೆಚ್ಚಗೆಯ ಅಂಶಗಳತ್ತ ಜನರನ್ನು ಒಲಿಸಿಕೊಳ್ಳುವಲ್ಲಿ ವಿಫಲರಾದ ಕೇಂದ್ರ ಪಡೆ ಅಣ್ಣಾ ಹಜಾರೆಯವರ ಭೂತವನ್ನು ಕೆದಕಿ ಹಗರಣಗಳನ್ನು ಹುಡುಕುವ ಕೆಲಸಕ್ಕೆ ಕೈಹಾಕಿದೆ. ಎಂದೋ ಯಾವಾಗಲೋ ಹುಟ್ಟು ಹಬ್ಬದ ಸಂದರ್ಭದಲ್ಲಿ ಅಣ್ಣಾ ಹಜಾರೆ ಸ್ವಂತಕ್ಕೆಂದು ಟ್ರಸ್ಟ್ ಹಣದಿಂದ ಒಂದೆರಡು ಲಕ್ಷ ರೂಪಾಯಿ ತೆಗೆದುಕೊಂಡಿದ್ದರೆಂಬ ಸಂಗತಿಯನ್ನು ಭೂತ ಕನ್ನಡಿಯಲ್ಲಿಟ್ಟು ತೋರಿಸುವ ಪ್ರಯತ್ನ ನಡೆದಿದೆ.

ಅಣ್ಣಾ ಹಜಾರೆ ಭ್ರಷ್ಟರಲ್ಲ ಎಂಬುದರ ಬಗ್ಗೆ ಎರಡು ಮಾತಿಲ್ಲ ನಿಜ. ಆದರೆ ಭ್ರಷ್ಟತೆಯ ವಿರುದ್ದ ಜನ ಸಮರವನ್ನೇ ಸಾರಿರುವ ಅವರು ಬಿಜೆಪಿಯ ಭ್ರಷ್ಟತೆಯ ಬಗ್ಗೆ ಕಂಡೂ ಕಾಣದಂತೆ ಇರುತ್ತಾರೆ ಎಂಬ ಆರೋಪ ಸಂಪೂರ್ಣವಾಗಿ ಹುಸಿಯೇನಲ್ಲ ಅನ್ನಿಸುತ್ತದೆ. ಅವರು ಬೆಂಗಳೂರಿಗೆ ಬಂದಾಗ ನಮ್ಮ ಯಡಿಯೂರಪ್ಪನವರ ಭ್ರಷ್ಟತೆಯ ಬಗ್ಗೆ ಚಕಾರ ಎತ್ತದೇ ಇದ್ದದನ್ನು ಕಂಡಾಗ. ನರೇಂದ್ರಮೋದಿಯನ್ನು ವಾಚಾಮಗೋಚರವಾಗಿ ಹೊಗಳಿ ತಮ್ಮ ಟೀಂ ಸದಸ್ಯರಲ್ಲಿ ಸಾಕಷ್ಟು ಮುಜುಗರ ಕಸಿವಿಸಿ ಉಂಟುಮಾಡಿದ ಅಣ್ಣಾ ಇತ್ತೀಚಿನ ಗುಜರಾತ್ ಭೇಟಿ ಸಂದರ್ಭದಲ್ಲಿ ಹೇಳಿದ್ದು ಗಾಂಧಿ ಹುಟ್ಟಿದ ಈ ನಾಡಿನಲ್ಲಿ ಹಾಲಿಗಿಂತ ಆಲ್ಕೋ ಹಾಲೇ ಜಾಸ್ತಿ ಹರಿಯುತ್ತಿದೆ. ಭ್ರಷ್ಟಾಚಾರ ಗಂಭೀರ ಸ್ವರೂಪದ್ದಾಗಿದೆ.

ಇಂದಿನ ವಿದ್ಯಮಾನಗಳನ್ನು ಗಮನಿಸಿದರೆ ಸ್ವಪ್ರತಿಷ್ಠೆಯೇ ಎರಡೂ ಬಣಗಳಿಗೆ ಮುಖ್ಯವಾದಂತಿದೆ. ಪ್ರಧಾನಿ ಹಾಗೂ ನ್ಯಾಯಾಂಗವನ್ನು ಮಸೂದೆ ವ್ಯಾಪ್ತಿಯೊಳಗೆ ಸೇರಿಸಲು ಪರಿಶೀಲನಾ ಸಮಿತಿ ಬಯಸಿದ್ದಲ್ಲಿ ತಾನದಕ್ಕೆ ಸಿದ್ಧ ಎಂದು ಕೇಂದ್ರ ಸರ್ಕಾರ ಹೇಳಿದೆ. ಇಷ್ಟಕ್ಕೂ ಪರಿಶೀಲನಾ ಸಮಿತಿಯಲ್ಲಿ ಕೇವಲ ಕಾಂಗ್ರಸ್ಸಿಗರಿಲ್ಲ ಎಲ್ಲಾ ಪಕ್ಷಗಳ ಪ್ರತಿನಿಧಿಗಳೂ ಇದ್ದಾರೆ. ಸಮಿತಿಗೆ ಸಾಕಷ್ಟು ಕಾಲಾವಕಾಶ ಕೊಟ್ಟರೆ ಅದು ಜನಲೋಕಪಾಲ, ಸರ್ಕಾರಿ ಲೋಕಪಾಲ ಎರಡರಲ್ಲೂ ಒಳ್ಳೆಯ ಅಂಶಗಳನ್ನು ಗುರುತಿಸಿ ಒಗ್ಗೂಡಿಸಿ ಉತ್ತಮ ಮಸೂದೆಯಾಗಿ ರೂಪಿಸಬಹುದು. ಮಸೂದೆ ಅಂಶಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ತಾನು ಸಿದ್ದ ಎಂದು ಸರ್ಕಾರ ಹೇಳುತ್ತಿದ್ದರೂ ತನ್ನದೇ ವರದಿಯನ್ನು ಸಂಸತ್ ಅಂಗೀಕರಿಸಲೇಬೇಕೆಂದು ಹಠ ತೊಟ್ಟು ಸತ್ಯಾಗ್ರಹ ನಿರಶನಗಳ ದಾರಿ ಹಿಡಿದಿರುವ ಅಣ್ಣಾ ಟೀಂ ವಿವೇಚನಾ ಜ್ಞಾನದ ಕೊರತೆ ಕಾಣುತ್ತಿದೆ. ಮಸೂದೆ ಮೊದಲು ಕಾಯ್ದೆಯಾಗಲಿ ಮುಂದೆ ಪರಿಸ್ಥಿತಿಗೆ ಅನುಗುಣವಾಗಿ ಕಾಯ್ದೆಯಲ್ಲಿ ತಿದ್ದುಪಡಿ ತರಬಹುದೆಂಬ ಸಾಮಾನ್ಯ ಜ್ಞಾನ ಕೂಡ ಸಿವಿಲ್ ಸೊಸೈಟಿಯ ಸದಸ್ಯರಿಗೆ ಇದ್ದಂತ್ತಿಲ್ಲ.

ಅತಿರಂಜಿತ, ಅವಾಸ್ತವಿಕ ಭಾವನೆಗಳಿಗೆ ಹತ್ತಿರವಿರಬಹುದಾದ ಜನಲೋಕಪಾಲ ಮಸೂದೆಗಿಂತ, ವಾಸ್ತವಿಕ ನೆಲೆಗಟ್ಟಿನ time tested ಆದ ಸರ್ಕಾರಿ ಲೋಕಪಾಲ ಉತ್ತಮವಿದೆ ಎಂಬ ಸಂಗತಿಯನ್ನು ಜನತೆಗೆ ಮನದಟ್ಟು ಮಾಡಿಕೊಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದರ ಬದಲು ಅದರ ಬಾಯಿಬಡುಕ ಮಂತ್ರಿಗಳು ಅಣ್ಣಾ ಟೀಂನ ಹಿನ್ನಲೆಯನ್ನು ಕೆದಕಿಕೊಂಡು ಹೊರಟ್ಟಿದ್ದು ಕೇಂದ್ರ ಸರ್ಕಾರ ಎಲ್ಲೋ ಬೆಣೆ ಸಿಗಿಸಿಕೊಂಡ ಪ್ರಾಣಿಯ ತೆರದಲ್ಲಿ ವರ್ತಿಸುತ್ತಿದೆ ಎಂದು ವಿಷಾದದಿಂದ ಹೇಳಬೇಕಾಗಿದೆ.

ಆಮರಣ ಉಪವಾಸ ನಡೆಸುವುದಾಗಿ ಹೇಳಿ ಹೊರಟ ಅಣ್ಣಾ ಟೀಂ ಅನ್ನು ಕೇಂದ್ರ ಸರ್ಕಾರ ನಡೆಸಿಕೊಂಡ ರೀತಿ ಮಾತ್ರ ಅದಕ್ಕೆ ಸೂಕ್ತ ವ್ಯೂಹ ರಚನೆ ಮಾಡುವಂತಹ ಮಾರ್ಗದರ್ಶಕರ ಕೊರತೆ ಕಾಡುತ್ತಿದೆ ಎಂಬುದಕ್ಕೆ ನಿದರ್ಶನ. ಉಗುರಿನಲ್ಲಿ ಚಿವುಟಿ ಹಾಕುವುದಕ್ಕೆ ಕೊಡಲಿಯನ್ನು ಬಳಸಿದಂತಿದೆ ಕೇಂದ್ರ ಸರ್ಕಾರ.

ಅಣ್ಣಾ ಬಂದನದ ಹೆಸರಿನಲ್ಲಿ ರಾಷ್ಟ್ರವ್ಯಾಪಿ ನಡೆದಿರುವ ಮೀಡಿಯಾ ಹೈಫ್‌ನಲ್ಲಿ ಜನತೆ ಸರ್ಕಾರ ಕಕ್ಕಾಬಿಕ್ಕಿಯಾಗಿದೆ. ತನ್ನ ಸಾಮ್ರಾಜ್ಯ ಧಾಹಕ್ಕೆ ಇರಾಕ್, ಈಜಿಪ್ಟ್, ಆಫ್‌ಘಾನಿಸ್ತಾನಗಳನ್ನು ಬಲಿತೆಗೆದುಕೊಂಡು ಸತತ ನರಮೇದ ನಡೆಸುತ್ತಿರುವ ದೊಡ್ಡಣ್ಣ ಅಮೆರಿಕಾ ಅಣ್ಣಾ ಚಳುವಳಿಯನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂಬ ಬುದ್ಧಿವಾದ ಹೇಳಲು ಮುಂದೆ ಬರುತ್ತಿದೆ. ಸರ್ಕಾರ ಹಾಗೂ ಸಿವಿಲ್ ಸೊಸೈಟಿ ನಡುವೆ ಯಾರೂ ನಿಜಕ್ಕೂ ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ ಎಂದು ತಿರ್ಮಾನಿಸಲಾಗದೆ ಜನ ತಬ್ಬಿಬ್ಬಾಗಿದ್ದಾರೆ. ಮಹಾ ಕವಿ ಗೋಪಾಲ ಕೃಷ್ಣ ಅಡಿಗರನ್ನು ಸ್ಮರಿಸಿ ಹೇಳುವುದಾದರೆ ರಾಜಧಾನಿ ದೆಹಲಿ ಗೊಂದಲಪುರಿಯಾಗಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ