ಬುಧವಾರ, ಆಗಸ್ಟ್ 3, 2011

My Article as it is appeared at Kendasampige.com

ರೈತರ ಆತ್ಮಹತ್ಯೆಯಲ್ಲೂ ಮುಂದಿರುವ ಕರ್ಣಾಟಕ: ಸಿದ್ದಾರ್ಥ ಬರಹ
ಸಿದ್ಧಾರ್ಥ
ಮಂಗಳವಾರ, 19 ಜುಲೈ 2011 (03:57 IST)
(ಚಿತ್ರಗಳು:ಸಂಗ್ರಹದಿಂದ)

ಮಾಹಿತಿ ಹಕ್ಕು ಕಾಯ್ದೆಯನ್ವಯ ರಾಜ್ಯಮಟ್ಟದ ಪತ್ರಿಕೆಯೊಂದಕ್ಕೆ ಸರ್ಕಾರ ನೀಡಿದ ಅಂಕಿಅಂಶಗಳಂತೆ ರಾಜ್ಯದಲ್ಲಿ ೨೦೦೬ರಿಂದ ೨೦೧೦ ಅವಧಿಯಲ್ಲಿ ೧೦,೪೫೯ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಕೇವಲ ೨೦೧೦ ವರ್ಷವೊಂದರಲ್ಲಿಯೇ ೨೫೮೫ ರೈತರು ಆತ್ಮಹತ್ಯೆಯ ಮೂಲಕ ಅಸುನೀಗಿಕೊಂಡಿದ್ದಾರೆ.

ರಾಜ್ಯ ಅಪರಾಧ ಮಾಹಿತಿ ಕೇಂದ್ರದಲ್ಲಿ ಲಭ್ಯವಿರುವ, ಮಾಹಿತಿಯಂತೆ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು(೪೦೮) ಸತ್ತಿದ್ದಾರೆ. ಚಿತ್ರದುರ್ಗ(೩೧೯) ಚಿಕ್ಕಮಗಳೂರು(೨೬೧) ನಂತರದ ಸ್ಥಾನಗಳನ್ನು ಪಡೆದಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿನಿಧಿಸುತ್ತಿರುವ ಶಿವಮೊಗ್ಗ ಜಿಲ್ಲೆಯಲ್ಲಿ ೧೭೫ ರೈತರು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.

ರೈತರು ಸೇರಿದಂತೆ ಸಾಮಾನ್ಯ ಆತ್ಮಹತ್ಯೆಗಳಲ್ಲಿ ಕೂಡ ಕರ್ನಾಟಕ ರಾಜ್ಯವೇ ಮುಂಚೂಣಿಯಲ್ಲಿದೆ ಎಂದು ಆಘಾತಕಾರಿ ಅಂಶವನ್ನು ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗಪಡಿಸಿದೆ.

ಹಾಗೆ ನೋಡಿದರೆ ವಿಶ್ವದಲ್ಲಿ ಸೂಪರ್ ಪವರ್ ಆಗಲು ದಾಪುಗಾಲಿಕ್ಕಿ ಮುನ್ನಡೆಯುತ್ತಿರುವ ಭಾರತವೇ ಆತ್ಮಹತ್ಯೆ ಬಾಂಬ್‌ನ ಮೇಲೆ ಕೂತಂತಿದೆ. ಇಡೀ ವಿಶ್ವದಲ್ಲಿ ನಡೆಯುತ್ತಿರುವ ಆತ್ಮಹತ್ಯೆ ಸಾವುಗಳ ಶೇ೧೦ ರಷ್ಟು ಭಾರತದ ನೆಲದಲ್ಲಿಯೇ ನಡೆಯುತ್ತಿವೆ. ೧೯೬೦ರಲ್ಲಿ ಪ್ರತಿ ೧೦ ಲಕ್ಷ ಜನಸಂಖ್ಯೆಗೆ ೫ ರಷ್ಟಿದ್ದ ಆತ್ಮಹತ್ಯೆ ಪ್ರಮಾಣ ಕಳೆದ ೫ ದಶಕಗಳಲ್ಲಿ ಏರುಗತಿ ಕಂಡಿದ್ದು ಇದೀಗ ೧೦.೫ರ ಗೆರೆಯನ್ನು ದಾಟಿದೆ. ದಕ್ಷಿಣ ಭಾರತದ ನಾಲ್ಕು ರಾಜ್ಯಗಳು ವಿಶ್ವದಲ್ಲಿಯೇ ಅತಿ ಹೆಚ್ಚು ಆತ್ಮಾಹುತಿಗಳು ನಡೆಯುತ್ತಿರುವ ಭೂ ಪ್ರದೇಶವೆಂಬ ಕುಖ್ಯಾತಿ ಪಡೆದಿದೆ.

ಪ್ರತಿ ೪೦ ಸೆಕೆಂಡಿಗೆ ಒಬ್ಬರಂತೆ ವಿಶ್ವದಲ್ಲಿ ಆತ್ಮಹತ್ಯೆಗಳು ನಡೆಯುತ್ತಿವೆ.

೧೫ರಿಂದ೨೪ ವಯೋಮಾನದವರು ಅದರಲ್ಲೂ ವಿಶೇಷವಾಗಿ ಹದಿವಯಸ್ಸಿನ ಹೆಣ್ಣುಮಕ್ಕಳಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿದೆ.

ಅಭಿವೃದ್ಧಿ ರಾಷ್ಟ್ರಗಳಿಗಿಂತಲೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಯೇ ಆತ್ಮಹತ್ಯೆ ಹೆಚ್ಚಿದೆ.

ಏಷ್ಯಾದ ಕೆಲವು ಭಾಗಗಳು, ಹಂಗೇರಿ, ರಷ್ಯಾದ ಕೆಲವು ಪ್ರದೇಶಗಳಲ್ಲಿ ಆತ್ಮಹತ್ಯೆ ಪ್ರಮಾಣ ೪೨ರಿಂದ ೨೭ ಇದೆ.

ನಂತರದ ಸ್ಥಾನ ಬೆಲ್ಜಿಯಂ ೨೧, ಪಿನ್ ಲ್ಯಾಂಡ್ ೨೦, ಸ್ವಿಜ್ಡರ್‌ಲ್ಯಾಂಡ್ ೨೦, ಆಸ್ಟ್ರೀಯ ೧೭.೬. ಜಪಾನ್ ೨೩.೮ರಿಂದ ಈ ಗುಂಪಿನ ಅಗ್ರಸ್ಥಾನದಲ್ಲಿದೆ.

ಜರ್ಮನಿ ೧೩.೫, ಚೀನಾ ೧೩.೯, ಸ್ವೀಡನ್ ೧೩.೪, ಆಸ್ಟ್ರೇಲಿಯ ೧೨.೭, ಕೆನಡಾ ೧೧.೯, ಇಂಡಿಯಾ ೧೦.೭, ಅಮೆರಿಕಾ ೧೧, ಸಿಂಗಪೂರ ೯.೫

ಅಮೆರಿಕಾಗೆ ಹೋಲಿಸಿದರೆ ಇಂಗ್ಲೆಂಡ್‌ನಲ್ಲಿ ಆತ್ಮಹತ್ಯೆ ಪ್ರಮಾಣ ಅತೀ ಕಡಿಮೆ ೬.೯.

ತೈಲ ಭರಿತ ಕೊಲ್ಲಿ ರಾಷ್ಟ್ರಗಳಲ್ಲಿ ಆತ್ಮಹತ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಕುವೈತ್ ೨, ಇರಾನ್ ೨, ದುಬೈ ಶೂನ್ಯ (ಪ್ರಾಯಶ: ಮುಸ್ಲೀಂ ರಾಷ್ಟ್ರಗಳಲ್ಲಿ ಪ್ರತಿ ಪ್ರಜೆಯ ಯೋಗಕ್ಷೇಮದ ಹೊಣೆಯನ್ನು ಅಲ್ಲಿನ ಸರ್ಕಾರಗಳೇ ಹೊತ್ತುಕೊಂಡಿರುವುದರಿಂದ ಆತ್ಮಹತ್ಯೆಗಳು ಕಡಿಮೆ ಎನ್ನಬಹುದೇ?.)

ವಿಷಪೂರಿತ ಆಹಾರ ಸೇವನೆ, ಕೀಟನಾಶಕಗಳ ಸೇವನೆ ಆತ್ಮಹತ್ಯೆಯ ಜನಪ್ರಿಯ ವಿಧಾನವಾದರೇ ಭಾರತದ ಬಹುತೇಕ ಹೆಣ್ಣುಮಕ್ಕಳು ಬಯಸುವುದು ಸಾಯುವ ತನಕ ನೇತಾಡುವ ನೇಣಿನ ಸ್ವಯಂ ಶಿಕ್ಷೆಯನ್ನು.

ಭಾರತದಲ್ಲಿ ಆತ್ಮಹತ್ಯೆಯಿಂದ ಸಾಯುವವರ ಪೈಕಿ ಶೇ. ೨೧ ರಷ್ಟು ಮಂದಿ ಮಹಿಳೆಯರು. ಪ್ರೀತಿ ವಾತ್ಸಲ್ಯದ ಕೊರತೆ, ವರದಕ್ಷಿಣೆಯ ಕಿರುಕುಳ, ಲೈಂಗಿಕ ಹಿಂಸೆ, ದೈಹಿಕ ಹಲ್ಲೆ ಇತ್ಯಾದಿ ಕಾರಣಗಳನ್ನು ಸ್ರೀಯರಲ್ಲಿ ಹೆಚ್ಚಿನ ಆತ್ಮಹತ್ಯೆಗೆ ನೀಡಬಹುದಾಗಿದೆ.

ನಂತರದ ಸರದಿ ರೈತರದು ಶೇ. ೧೫. ಮಳೆ ಹಾನಿ, ಬರಗಾಲ, ಬೆಳೆದ ಬೆಳೆಗಳಿಗೆ ಸೂಕ್ತ ದಾರಣೆ ಸಿಗದಿರುವುದು, ಖಾಸಗಿ ಲೇವಾದೇವಿಗಾರರಿಂದ ದುಬಾರಿ ಬಡ್ಡಿ ದರದಲ್ಲಿ ಸಾಲ ಪಡೆದು ಹಿಂತಿರುಗಿಸಲು ವಿಫಲರಾಗುವುದು, ಕೀಟನಾಶಕಗಳ ಕೃಷಿ ಬೀಜಗಳ ಕೊರತೆ, ಕೈಗಾರಿಕಿಕರಣದ ಹೆಸರಿನಲ್ಲಿ ಕೃಷಿಕರನ್ನು ಒಕ್ಕಲೆಬ್ಬಿಸುವುದು ಇವೇ ಕಾರಣಗಳನ್ನು ರೈತರ ಆತ್ಮಹತ್ಯೆಗೆ ನೀಡಲಾಗುತ್ತದೆ. ಮಾನಸಿಕ ಸಮಸ್ಯೆಗಳು ಕುಡಿತ, ನಿರುತ್ಸಾಹ, ಒತ್ತಡ, ಖಿನ್ನತೆ, ನಿರುದ್ಯೋಗ, ಒಂಟಿತನ, ಅನಾಥ ಪ್ರಜ್ಞೆ, ಲೈಂಗಿಕ ಅತೃಪ್ತಿ ಇವೇ ಸಾಮಾಜಿಕ ಕಾರಣಗಳು ಆತ್ಮಹತ್ಯೆಗೆ ಪ್ರೆರೇಪಿಸುತ್ತದೆ.

ಭಾರತದಲ್ಲಿ ಪ್ರತಿ ೩೦ ನಿಮಿಷಕ್ಕೆ ಒಬ್ಬ ರೈತ ಸಾಯುತ್ತಿದ್ದಾನೆ. ರಾಷ್ಟ್ರೀಯ ಸಮೀಕ್ಷಾ ಸಂಸ್ಥೆ (ಓSS) ಅದ್ಯಾಯನದಂತೆ ಕರ್ನಾಟಕದ ಶೇ. ೬ ರಷ್ಟು ಹಳ್ಳಿಗಾಡಿನ ರೈತಾಪಿ ವರ್ಗದ ಕುಟುಂಬಗಳು ಸಾಲದ ಶೂಲೆಯಲ್ಲಿ ಸಿಲುಕಿ ಹಾಕಿಕೊಂಡಿವೆ. ಶೇ ೮೦ ಕ್ಕೂ ಹೆಚ್ಚು ರೈತರು ೫ ಎಕರೆ ಅಥವಾ ಅದಕ್ಕಿಂತಲೂ ಕಡಿಮೆ ಭೂ ಬಾಗವನ್ನು ಹೊಂದಿರುತ್ತಾರೆ. ೨೦೧೧ರ ಜಣಗಣತಿ ಅನ್ವಯ ಕಳೆದ ೧೦ ವರ್ಷದಲ್ಲಿ ನಗರಗಳಿಗೆ ವಲಸೆ ಹೋದ ಹಳ್ಳಿಗರ ಸಂಖ್ಯೆ ಸರಿ ಸುಮಾರು ಶೇ. ೧೧. ಸ್ವಂತ ಭೂಮಿ ಇಲ್ಲದ ಕೃಷಿ ಕಾರ್ಮಿಕರು ಕೃಷಿ ಸಂಬಂಧಿತ ಕಾರಣಗಳಿಂದಾಗಿಯೇ ಆತ್ಮಹತ್ಯೆಗೆ ಈಡಾದರೂ ಕೂಡ ದಾಖಲೆಗಳು ಅವರನ್ನು ರೈತರೆಂದು ಪರಿಗಣಿಸಲಾಗುತ್ತಿಲ್ಲವಾದ್ದರಿಂದ ಸಾವಿನ ಸಂಖ್ಯೆಯನ್ನು ವಾಸ್ತವಕ್ಕಿಂತಲೂ ಕಡಿಮೆಯಾಗಿಯೇ ತೋರಿಸಲಾಗುತ್ತದೆ.

ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳಿಗೂ ರಾಜಕೀಯ ವಿವಾದಗಳಿಗೂ ಬಿಡಿಸಲಾಗದ ನಂಟು. ಈ ಹಿಂದೆ ೧೯೯೮-೯೯ರಲ್ಲಿ ಜನತ ದಳ ಸರ್ಕಾರ ಅಧಿಕಾರದಲ್ಲಿದ್ದಾಗ ಆಂಧ್ರ ಪ್ರದೇಶದ ಗಡಿಭಾಗದ ಜಿಲ್ಲಿಗಳಲ್ಲಿ ವಿಶೇಷವಾಗಿ ಬೀದರ್ ಹಾಗೂ ಗುಲ್ಬರ್ಗ ಜಿಲ್ಲೆಗಳಲ್ಲಿ ನಡೆದ ಸರಣಿ ಆತ್ಮ ಹತ್ಯೆ ಪ್ರಕರಣಗಳು ಇಡೀ ವಿಶ್ವದ ಗಮನವನ್ನು ಸೆಳೆದಿದ್ದವು. ಆಗಷ್ಟೇ ರಾಜಕಾರಣಕ್ಕೆ ಕಾಲಿಟ್ಟು ಪಳಗುತ್ತಿದ್ದ ಸೋನಿಯಾ ಗಾಂಧಿ ಈ ಪ್ರದೇಶಕ್ಕೆ ಭೇಟಿ ನೀಡಿ ಆತ್ಮಹತ್ಯೆಗೊಳಗಾದ ರೈತರ ಕುಟುಂಬಗಳನ್ನು ಸಂಪರ್ಕಿಸಿ ಪರಿಹಾರ ನೀಡಿ ಸಂತೈಸಿದ್ದು ವಿಶೇಷ ಸುದ್ದಿಯಾಯಿತು. ೧೯೯೯ ಚುನಾವಣೆಯಲ್ಲಿ ಜನತಾ ದಳ ನಾಮಾವಶೇಷವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ರೈತರ ಆತ್ಮಹತ್ಯೆಯು ಕೂಡ ತಮ್ಮ ಪಾಲಿನ ವಂತಿಕೆಯನ್ನು ಸಲ್ಲಿಸಿತ್ತು. ಆನಂತರವೂ ರಾಜ್ಯದಲ್ಲಿ ಬರಗಾಲ ಮುಂದುವರೆದು ರೈತರ ಆತ್ಮಹತ್ಯೆಗಳು ನಡೆಯುತ್ತಲೇ ಇದ್ದಾಗ ಕಂಗಾಲಾದ ಎಸ್.ಎಂ. ಕೃಷ್ಣ ಸರ್ಕಾರ ಜಿ.ಕೆ ವೀರೇಶ್ ನೇತೃತ್ವದ ತಜ್ಞರ ಸಮಿತಿಯನ್ನು ರಚಿಸಿತ್ತು. ಸಮಿತಿಯ ಶಿಫಾರಸ್ಸುಗಳಂತೆ ಆತ್ಮಹತ್ಯೆಗೆ ಈಡಾದ ಪ್ರತಿ ರೈತರ ಕುಟುಂಬಗಳಿಗೆ ತಲಾ ೧ ಲಕ್ಷ ರೂಪಾಯಿ ಪರಿಹಾರ ಸಿಕ್ಕಿದ್ದು ಬಿಟ್ಟರೆ ಈ ಸಮಿತಿಯಿಂದ ಹೇಳಿಕೊಳ್ಳುವಂತಹ ಸಾದನೆಯಾಗಲಿಲ್ಲ. ತಮ್ಮ ಸಾವಿನ ನಂತರ ತಮ್ಮ ಕುಟುಂಬದ ಸದಸ್ಯರಿಗೆ ೧ ಲಕ್ಷ ರೂಪಾಯಿ ದೊರಕುತ್ತದೆ ಎಂಬ ಖಾತರಿಯೇ ಎಷ್ಟೋ ಮಂದಿ ರೈತರನ್ನು ಆತ್ಮಹತ್ಯೆಯ ಹಾದಿ ಹಿಡಿಯಲು ಪ್ರೇರೇಪಿಸಿತು ಎಂಬ ಆರೋಪವೂ ಕೇಳಿಬಂತು. (ಇತ್ತೀಚೆಗೆ ತೆರೆಕಂಡು ಯಶಸ್ವಿಯಾದ ಪೀಪ್ಲಿ ಲೈವ್ ಹಿಂದಿ ಚಲನಚಿತ್ರದಲ್ಲಿ ರೈತರ ಆತ್ಮಹತ್ಯೆಯಂತಹ ಗಂಭೀರ ವಿಷಯವೊಂದು ಹೇಗೆ ರಾಜಕಾರಣಿಗಳ ನಡುವೆ ರಾಜಕೀಯ ಪಕ್ಷಗಳು ಮತ್ತು ಕೇಂದ್ರ-ರಾಜ್ಯ ಸರ್ಕಾರಗಳ ನಡೆವೆ ಆಡಲ್ಪಡುವ ಚೆಂಡಾಟವಾಗುತ್ತದೆ ಎಂಬ ವಿಷಯವನ್ನು ಸಮರ್ಥ ರೀತಿಯಲ್ಲಿ ಚಿತ್ರಿಸಲಾಗಿದೆ.)

೨೦೦೫ ರಷ್ಟು ಹಿಂದೆಯೇ ಇಡೀ ರಾಷ್ಟ್ರದಲ್ಲಿಯೇ ಆತ್ಮಹತ್ಯೆಯ ಪ್ರಮಾಣ ಅತೀ ಹೆಚ್ಚಿದ್ದ ಮಹಾರಾಷ್ಟ್ರದ ವಿದರ್ಭ ವಿಭಾಗದ ೬ ಜಿಲ್ಲೆಗಳನ್ನು ಗುರುತಿಸಿ ೩೭೫೦ ಕೋಟಿ ರೂಗಳ ವಿಶೇಷ ಪ್ಯಾಕೇಜ್ ಪ್ರಕಟಿಸಿತು. ೨೦೦೬-೦೮ ಅವಧಿಯಲ್ಲಿ ಮಹಾರಾಷ್ಟ್ರದ ರೈತರಿಗೆಂದೇ ಕೇಂದ್ರ ಸರ್ಕಾರ ೨೦ ಸಾವಿರ ಕೋಟಿ ರೂಗಳ ಅನುದಾನ ನೀಡಿತ್ತು ಇಷ್ಟಾಗಿಯೂ ಈ ಅವಧಿಯಲ್ಲಿ (೨೦೦೫-೨೦೧೦) ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ೧೨೪೯೩.

ರಾಜ್ಯದಲ್ಲಿಯೂ ಆತ್ಮಹತ್ಯೆ ಪ್ರಕರಣಗಳು ನಿಲ್ಲದೇ ಇದ್ದಾಗ, ವಿದರ್ಭ ಮಾದರಿಯಲ್ಲಿಯೇ ಆತ್ಮಹತ್ಯೆಗಳು ಹೆಚ್ಚಿದ್ದ ೬ ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿಗಳ ವಿಶೇಷ ಪ್ಯಾಕೇಜ್ ಪ್ರಕಟಿಸಲಾಯಿತು. ಈ ಪ್ಯಾಕೇಜಿನಂತೆ ಚಿಕ್ಕಮಗಳೂರು, ಬೆಳಗಾವಿ, ಶಿವಮೊಗ್ಗ, ಚಿತ್ರದುರ್ಗ, ಕೊಪ್ಪಳ ಹಾಗೂ ಕೊಡಗು ಜಿಲ್ಲೆಗಳಲ್ಲಿ ೩೭೫ ಕೋಟಿ ರೂಗಳ ವೆಚ್ಚದಲ್ಲಿ ಹಲವು ಪರಿಹಾರಗಳನ್ನು ಘೋಷಿಸಲಾಯಿತು. ೨೦೦೮ ಮತ್ತು ೨೦೧೧ ರಲ್ಲಿ ಪ್ರಧಾನ ಮಂತ್ರ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಪ್ರತಿ ಜಿಲ್ಲೆಗೆ ತಲಾ ೫೦ ಲಕ್ಷ ರೂಗಳ ಪರಿಹಾರ ನೀಡಲಾಯಿತು.

ರೈತರ ಹೆಸರಿನ ಈ ಪರಿಹಾರ ಕಾರ್ಯಗಳು ಅದೆಷ್ಟು ಮಟ್ಟಿಗೆ ಜಾರಿಯಾಯಿತೋ ಎಷ್ಟು ಮಂದಿ ರೈತರಿಗೆ ಈ ಪ್ಯಾಕೇಜಿನ ಲಾಭ ತಲುಪಿತು ಎಂಬುದು ಬಹುಕೋಟಿ ರೂಪಾಯಿ ಪ್ರಶ್ನೆ. ಏಕೆಂದರೆ ವಿದರ್ಭ ವಿಭಾಗದಲ್ಲಿ ಈ ಹಿಂದೆ ಕೊಡಮಾಡಿದ ಪ್ರಧಾನಿಗಳ ವಿಶೇಷ ಪ್ಯಾಕೇಜಿನ ಅನುಷ್ಠಾನದಲ್ಲಿ ವ್ಯಾಪಕ ಹಣ ದುರುಪಯೋಗ, ಭ್ರಷ್ಟಾಚಾರ, ಅಧಿಕಾರಸ್ಥ ಸಂಸತ್ ಸದಸ್ಯರು, ಶಾಸಕರು, ಅಧಿಕಾರಿಗಳು ಮತ್ತವರ ಬಂದುಗಳೇ ರೈತರ ಹೆಸರಿನಲ್ಲಿ ಪರಿಹಾರ ಹಣ ಗುಳುಂ ಮಾಡಿರುವ ಸಂಗತಿ ಇದೆ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಬಹಿರಂಗವಾಗಿದ್ದು, ಕಾಂಗೆಸ್‌ನ ಒಬ್ಬ ಸಂಸತ್ ಸದಸ್ಯ, ಕಾಂಗ್ರೆಸ್, ಬಿಜೆಪಿ ಮತ್ತು ಎನ್‌ಸಿಪಿಯ ಮೂವರು ಶಾಸಕರು ಸೇರಿದಂತೆ ೨೩ ಮಂದಿ ವಿರುದ್ದ ವಿಲಾಸ್ ರಾವ್ ದೇಶಮುಖ್ ಸರ್ಕಾರ ಕ್ರಿಮಿನಲ್ ಮೊಕದ್ದಮೆ ಗಳನ್ನು ಹೂಡಿ ವರ್ಷಗಳೇ ಉರುಳಿದರು ಇದುತನಕ ಯಾವೊಬ್ಬ ತಪ್ಪಿತಸ್ಥನಿಗೂ ಶಿಕ್ಷೆಯಾದ ಪ್ರಸಂಗ ವರದಿಯಾಗಿಲ್ಲ.
ಇಷ್ಟಾಗಿಯೂ ರೈತರ ಹೆರಿನಲ್ಲಿ ಸಹಸ್ರ ಸಹಸ್ರ ಕೋಟಿ ರೂಗಳ ಯೋಜನೆಗಳನ್ನು ಪ್ರಕಟಿಸುವ ಪರಿಪಾಠಗಳನ್ನು ಸರ್ಕಾರಗಳು ನಿಲ್ಲಿಸಿಯೇ ಇಲ್ಲ ಎಂಬುದಕ್ಕೆ ವರ್ಷಂ ಪ್ರತಿ ರಾಜ್ಯ ಹಾಗೂ ಕೇಂದ್ರಗಳ ಬಜೆಟ್‌ನಲ್ಲಿ ಘೋಷಣೆಯಾಗುತ್ತಿರುವ ಯೋಜನೆಗಳ ಸರಮಾಲೆಯೇ ಸಾಕ್ಷಿ.

ಕೃಷಿ ಸಾಲದ ಮೇಲಿನ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಿ ಅದೆಷ್ಟೋ ರೈತರನ್ನು ಉದ್ಧಾರ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಜೆಡಿಎಸ್ ಬಿಜೆಪಿ ಪಕ್ಷಗಳ ಅಬ್ಬರದ ಪ್ರಚಾರಗಳ ನಡುವೆಯೇ ಕೇಂದ್ರ ಸರ್ಕಾರ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಇಡೀ ರಾಷ್ಟ್ರದ ಒಟ್ಟಾರೆ ರೈತರ ಕೃಷಿ ಸಾಲವನ್ನೇ ಮನ್ನಾ ಮಾಡಿ ಹೊಸತೊಂದು ಸಂಪ್ರದಾಯವನ್ನು ಸೃಷ್ಟಿಸಿತ್ತು. ಹೀಗೆ ಒಂದೇಟಿಗೆ ಮಂಗ ಮಾಯವಾದ ಸಾಲದ ಒಟ್ಟು ಮೊತ್ತ ೭೦ ಸಾವಿರ ಕೋಟಿ (ಸರಿ ಸುಮಾರು ಕರ್ನಾಟಕ ರಾಜ್ಯದ ಒಂದು ವರ್ಷದ ಬಜೆಟ್‌ನ ಮೊತ್ತ) ಎಂದರೆ ಸಾಲ ಮನ್ನಾದ ಅಗಾಧತೆ ಅರಿವಾಗುತ್ತದೆ.

ಮತ್ತೂ ಮುಂದುವರೆದು ಕೇಂದ್ರ ಸರ್ಕಾರ ವಾರ್ಷಿಕ ೬೦ ಸಾವಿರ ಕೋಟಿ ರೂಪಾಯಿ ವೆಚ್ಚಮಾಡಿ ಮಹಾತ್ಮ ಗಾಂಧಿ ಹೆಸರಿನಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿಗೆ ತಂದಿದೆ.

ರಾಜ್ಯದಲ್ಲಿಯೂ ಈ ಯೋಜನೆ ಅನುಷ್ಟಾನ ಆರಂಭವಾಗಿ ೩ವರ್ಷಗಳೇ ಉರುಳಿವೆ. ಈ ಯೋಜನೆಯ ಅನುಷ್ಠಾನದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿವೆ ಕಾಮಗಾರಿಗಳು ಕೇಲ ಕಾಗದದ ಮೇಲಷ್ಟೇ ಉಳಿದು ಕೋಟ್ಯಂತರ ರೂಪಾಯಿ ಹಣ ನುಂಗಿ ಹಾಕಲಾಗುತ್ತಿದೆ ಎಂಬ ದೂರುಗಳು ದಿನಂಪ್ರತಿ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಇತರ ಯೋಜನೆಗಳಲ್ಲಿ ಹಣ ಪೋಲಾಗುವ ಪ್ರಮಾಣ ಒಟ್ಟು ಅನುಧಾನದ ಶೇ೨೫-೩೦ ರಷ್ಟಿದ್ದರೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈ ಪ್ರಮಾಣ ಶೇ೭೦ ರಷ್ಟು ಎಂದು ಈ ಯೋಜನೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳೇ ಅಂತರಂಗದಲ್ಲಿ ಹೇಳಿಕೊಳ್ಳುತ್ತಾರೆ.

ಅಲ್ಲ್ಲೊಂದಷ್ಟೂ ಇಲ್ಲೊಂದಿಷ್ಟು ಅಧಿಕಾರಿಗಳ ಬಂಧನ, ಸಸ್ಪೆಂಡ್ ಇತ್ಯಾದಿ ಕ್ರಮಗಳನ್ನು ರಾಜ್ಯ ಸರ್ಕಾರ ಅರೆ ಮನಸ್ಸಿನಿಂದ ಕೈಗೊಂಡಿರುವುದನ್ನು ಬಿಟ್ಟರೆ ಎಲ್ಲಿಯೂ ಭ್ರಷ್ಟಾಚಾರಕ್ಕೆ ಕಾರಣವಾಗುವ ಅಂಶಗಳನ್ನು ಗುರುತಿಸಿ ಅವುಗಳನ್ನು ನಿವಾರಿಸಿ ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ಯೋಜನೆಯ ಲಾಭವನ್ನು ತಲುಪಿಸುವ ಇಚ್ಚಾಶಕ್ತಿ ಸರ್ಕಾರಗಳಿಗೆ ಇದ್ದಂತ್ತಿಲ್ಲ.

ಇದೀಗ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಯೋಜನೆಯನ್ನು ಜಾರಿಗೆ ತರಲು ಹವಣಿಸುತ್ತಿದೆ. ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯ ಹೆಸರಿನ ಈ ಯೋಜನೆಯನ್ವಯ ರೈತರೂ ಸೇರಿದಂತೆ ಬಡತನ ರೇಖೆಯ ಕೆಳಗಿರುವ ಬಡ ಕುಟುಂಬಗಳಿಗೆ ಅಗತ್ಯವಾದ ಆಹಾರ ಧಾನ್ಯವನ್ನು ರಿಯಾಯಿತಿ ದರದಲ್ಲಿ ಒದಗಿಸಲು ಉದ್ದೇಶಿಸಲಾಗಿದೆ. ವಾಸ್ತವವಾಗಿ ತಮಿಳುನಾಡಿನ ಕರುಣಾನಿಧಿ ಸರ್ಕಾರ ಈ ಯೋಜನೆಯನ್ನು ಕಾರ್ಯಗತಗೊಳಿಸಿ ೫ ವರ್ಷಗಳೇ ಉರುಳಿವೆ. ಜಯಲಲಿತ ಸರ್ಕಾರ ಮತ್ತೂ ಮುಂದುವರಿದು ಪ್ರತಿ ಕುಟುಂಬಕ್ಕೂ ತಲಾ ೧೫ ಕೆಜಿ ಅಕ್ಕಿಯನ್ನು ಉಚಿತವಾಗಿ ಪೂರೈಸುವ ಚುನಾವಣಾ ಕಾಲದ ಭರವಸೆಯನ್ನು ಇದೀಗ ಅನುಷ್ಠಾನಗೊಳಿಸಬೇಕಾಗಿದೆ. ಉಚಿತವಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ಆಹಾರ ನೀಡುವ ಈ ವ್ಯವಸ್ಥೆಯಿಂದಾಗಿ ತಮಿಳುನಾಡಿನಲ್ಲಿ ಕೂಲಿ ಕೆಲಸ ಮಾಡಲು ಜನರೇ ಇಲ್ಲದಂತಾಗಿದೆ, ರೈತರು ಸೋಮಾರಿಗಳಾಗುತ್ತಿದ್ದಾರೆ ಎಂಬರ್ಥದ ವರದಿಗಳು ಬರುತ್ತಿವೆ. ಸಮಾಜ ಶಾಸ್ತ್ರಜ್ಞರ ಕೂಲಂಕುಶ ಅಧ್ಯಯನಕ್ಕೆ ಇದು ಉತ್ತಮ ವಿಷಯವಾಗುವಲ್ಲಿ ಸಂಶಯವಿಲ್ಲ.

ಈ ಎಲ್ಲಾ ಯೋಜನೆಗಳ ಪರಿಣಾಮ ಹೇಗೂ ಇರಲಿ, ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಇಳಿಮುಖವಾಗುವ ಬದಲು ಏರುಗತಿಯಲ್ಲಿಯೇ ಮುಂದುವರೆಯುತ್ತಿರುವುದು ಕೃಷಿ ರಂಗದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿವೆಂಬುದಕ್ಕೆ ನಿದರ್ಶನವಾಗಿದೆ. ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿರುವುದಕ್ಕು ಅವರ ಉದ್ಧಾರಕ್ಕೆ ಸರ್ಕಾರಗಳು ಪ್ರಕಟಿಸುವ ಯೋಜನೆಗಳು ಭ್ರಷ್ಟಾಚಾರಕ್ಕೆ ಸಿಲುಕಿ ವಿಫಲವಾಗುತ್ತಿರುವುದಕ್ಕೂ ಬಾದರಾಯಣ ಸಂಬಂದವಿದ್ದೇ ಇರುತ್ತದೆ.

ಪುಟದ ಮೊದಲಿಗೆ
Votes: 2 Rating: 4.5
Siddarth, Farmers aren't that innocent as depicted. They wanted 30 lakhs/acre at Mundaragi from Posco for the land that was worth 30 thousands/acre. Farmers at Harapanahalli want 1 crore/acre from natural gas pipeline project. The reason for farmers suiciding is because they can't sell their land to the community that has money. They have to sell their land to other farmers ONLY, because of a outdated rule set in Karnataka....
Re: Obviously they are greedy sunaath...you r not getting the point...
Re: ರೈತರು ಅಮಾಯಕರೊ ಅಥವಾ ಲಫಂಗರೊಆನ್ನುವ ಪ್ರಶ್ನೆ ಇಲ್ಲಿಲ್ಲ. ರೈತರು ಬೆಳೆಗಾಗಿ ಸಾಲ ಮಾಡುವದು ಅನಿವಾರ್ಯವಾಗಿದೆ. ಅವರ ಬೆಳೆಗೆ ತಕ್ಕ ಬೆಲೆ ಸಿಗುವದಿಲ್ಲ. ನಿರಂತರ ಬಡತನ ಹಾಗು ಸಾಲದ ಸುಳಿಯಲ್ಲಿ ಸಿಲುಕಿದ ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ ಅನ್ನುವದು ವಾಸ್ತವ ಸಂಗತಿ. ಎರಡನೆಯದಾಗಿ ರೈತರ ಜಮೀನಿಗಾಗಿ ನೀವು ಎಷ್ಟೇ ಬೆಲೆ ಕೊಟ್ಟರೂ ಅವರಿಗೆ ಪ್ರಯೋಜನವಿಲ್ಲ. ಏಕೆಂದರೆ ಅವರಿಗೆ ಒಕ್ಕಲುತನ ಬಿಟ್ಟು ಬೇರೇನೂ ಮಾಡಲು ಬರದು. ಜಮೀನಿನ ಬದಲಾಗಿ ಕೈಗಾರಿಕೆಯಲ್ಲಿ ಕೆಲಸ ಕೊಟ್ಟರೆ ಅವರು ಸ್ವತಂತ್ರ ಜೀವನ ಕಳೆದುಕೊಂಡು ಸ್ಲಮ್ಮುಗಳಲ್ಲಿಯ ಶ್ರಮಿಕರಾಗುವರು. ಇವೆಲ್ಲದರ ಪರಿಹಾರವೆಂದು ಅವರಿಗೆ ಕೋಟಿ ರೂಪಾಯಿ ಕೊಟ್ಟರೆ ತಪ್ಪೇನಿದೆ? -ಸುನಾಥ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ