ಶುಕ್ರವಾರ, ಸೆಪ್ಟೆಂಬರ್ 2, 2011

My new article in Kendasampige.com

ದಾರಿ ಯಾವುದಯ್ಯಾ ಕರುನಾಡಿಗೆ?:ಸಿದ್ಧಾರ್ಥ ಕೇಳಿರುವ ಪ್ರಶ್ನೆ
ಸಿದ್ಧಾರ್ಥ
ಶುಕ್ರವಾರ, 2 ಸೆಪ್ಟೆಂಬರ್ 2011 (04:49 IST)

ಅತ್ತ ನೂತನ ಮುಖ್ಯಮಂತ್ರಿ ಸದಾನಂದಗೌಡರು ದೇವಾಲಯ ಭೇಟಿ, ಅಭಿನಂದನಾ ಸಮಾರಂಭಗಳಲ್ಲಿ ಮುಳುಗಿ ಹೋದಂತೆ, ಮಾಜಿ ಮುಖ್ಯಮಂತ್ರಿಗಳಿಬ್ಬರೂ ತಮ್ಮ ಮೇಲಿನ ಕ್ರಿಮಿನಲ್ ಪ್ರಕರಣಗಳ ಸಂಬಂಧದಲ್ಲಿ ಕೋರ‍್ಟ್ ಬಾಗಿಲು ಎಡೆತಾಕುತ್ತಿರುವಂತೆ, ೧೨ ದಿನಗಳ ಉಪವಾಸದ ನಂತರ ಅಣ್ಣಾ ಹಜಾರೆ ಮರಳಿ ಸ್ವಗ್ರಾಮದತ್ತ ಅಭಿಮುಖವಾಗುತ್ತಿದಂತೆ, ಇತ್ತ ಬಡತನವನ್ನು ಭರಿಸಲಾಗದೆ, ತಿನ್ನಲು ಕೂಳಿಲ್ಲದೆ ನಿರುದ್ಯೋಗಿ ಪುರುಷನೊಬ್ಬ ತನ್ನ ಹಸುಗೂಸನ್ನು ಮಾರಿಕೊಂಡ ಮನ ಕಲುಕುವ ಪ್ರಸಂಗ ಮುಖ್ಯಮಂತ್ರಿಯ ತವರೂರಿನಿಂದ ವರದಿಯಾಗಿದೆ. ಹಾಸನ ಮೂಲದ ಕೃಷಿಕ ದಂಪತಿಗಳು ಮಂಗಳೂರಿಗೆ ವಲಸೆ ಬಂದು ಅಲ್ಲಿಯೂ ಕೆಲಸ, ಕೂಳು ಸಿಗದೆ ಹತಾಶರಾಗಿ ಮಗುವನ್ನು ಮಾರುವಂತಹ ಪ್ರಸಂಗದಿಂದ ನಾಗರಿಕ ಸಮಾಜ ನಾಚಿಕೆಯಿಂದ ತಲೆತಗ್ಗಿಸುವಂತಾಗಬೇಕು. ಬಡವರ ಉದ್ಧಾರಕ್ಕೆಂದೇ ಕೇಂದ್ರ-ರಾಜ್ಯ ಸರ್ಕಾರಗಳ ಪೈಪೋಟಿ ಮೇಲೆ ಕೋಟ್ಯಂತರ ರೂಪಾಯಿ ವೆಚ್ಚಮಾಡುತ್ತಿದ್ದರೂ, ಅದು ತಲುಪಬೇಕಾದವರಿಗೆ ತಲುಪದೇ ನಡುದಾರಿಯಲ್ಲಿಯೇ ದುರ್ವ್ಯಯ ವಾಗುತ್ತಿದೆ, ಸೋರಿ ಹೋಗುತ್ತಿದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನಾ ಪಟ್ಟಿಯನ್ನು ಅವಲೋಕಿಸಿದರೆ ಕಾಣುವುದು ಕೇವಲ ಶೂನ್ಯ ಮಾತ್ರ. ಎಲ್ಲಾ ರಂಗಗಳಲ್ಲೂ ಆಡಳಿತದ ಎಲ್ಲಾ ಹಂತಗಳಲ್ಲೂ ಭ್ರಷ್ಟಾಚಾರ ಕಣ್ಣಿಗೆ ಕಾಣುವಷ್ಟು ಡಾಳವಾಗಿದೆ. ಅಧಿಕಾರಿ ವರ್ಗಕ್ಕೆ ಸಾರ್ವಜನಿಕ ಕೆಲಸವೆಂದರೆ ಅಲರ್ಜಿ, ಸ್ವಂತಕೆಲಸವೆಂದರೆ ಆಪ್ಯಾಯಮಾನವೆಂದಾಗಿದೆ. ಬಡಜನರ ಉದ್ದಾರದ ಹೆಸರಿನಲ್ಲಿ ರೂಪಿಸಿದ ಎಷ್ಟೋ ಯೋಜನೆಗಳು ಸೋರಿಕೆಯಿಂದಾಗಿ ತಮ್ಮ ಉದ್ದೇಶ ಸಾಧನೆಯಲ್ಲಿ ವಿಫಲವಾಗಿದೆ. ಕೇಂದ್ರ ಸರ್ಕಾರ ತುಂಬಾ ಮುತುವರ್ಜಿಯಿಂದ ತಂದ ಉದ್ಯೋಗ ಖಾತ್ರಿ ಕಾಯ್ದೆಯ ವೈಪಲ್ಯವಂತೂ ಲಕ್ಷ ಕೋಟಿ ರೂಪಾಯಿ ಅಪವ್ಯಯದ ನಂತರವಷ್ಟೇ ಸಾರ್ವಜನಿಕರ ಕಣ್ಣಿಗೆ ಎದ್ದು ಕಾಣುತ್ತಿದೆ. ಕಾಗದದ ಮೆಲೆಯೇ ಅದೆಷ್ಟೋ ಕಾಮಗಾರಿಗಳನ್ನು ರೂಪಿಸಿ ಅನುಷ್ಠಾನಗೊಳಿಸಿ ಮುಗಿಸಲಾಗಿದೆ. ಅದೆಷ್ಟೋ ಸಾವಿರ ಕೋಟಿ ರೂಪಾಯಿಗಳು ಅಸಂಖ್ಯಾತ ಭ್ರಷ್ಟರ ಉದ್ದಾರದಲ್ಲಿ ವಿನಿಯೋಗವಾಗುತ್ತಿದೆ.

ಉದ್ಯೋಗ ಖಾತ್ರಿ ಯೋಜನೆ ಒಂದರಲ್ಲೇ ಹಣದುರುಪಯೋಗ, ಅವ್ಯವಹಾರ ಪ್ರಕರಣಗಳ ಒಟ್ಟು ೧೬ ಸಾವಿರ ಪ್ರಕರಣಗಳ ಎರಡು ವರ್ಷಗಳಲ್ಲಿ ದಾಖಲಾಗಿವೆ. ೪೮ ಗ್ರಾಮ ಪಂಚಾಯತ್‌ಗಳ ಅದ್ಯಕ್ಷರೂ ಸೇರಿದಂತೆ ೧೮೯ ಮಂದಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ೨೫೬ ಉದ್ಯೋಗಿಗಳ ವಿರುದ್ದ ಶಿಸ್ತು ಕ್ರಮ ಕೈಗೊಂಡಿದ್ದು, ೧೫೭ ಸರ್ಕಾರಿ ನೌಕರರನ್ನು ಅಮಾನತ್ತಿನಲ್ಲಿಡಲಾಗಿದೆ, ಸರಿ ಸುಮಾರು ೪೦೦೦ ಕೋಟಿ ರೂಪಾಯಿ ದುರುಪಯೋಗ ನಡೆದಿದೆ ಎಂದು ಸಚಿವರೇ ಒಪ್ಪಿಕೊಂಡಿದ್ದಾರೆ. ವಾಸ್ತವವಾಗಿ ದುರುಪಯೋಗ ಪ್ರಕರಣಗಳು ಇನ್ನೂ ಜಾಸ್ತಿಯೇ ಇರಲು ಸಾದ್ಯವಿದೆ. ಈ ಕಾಯ್ದೆ ಜಾರಿಯಲ್ಲಿ ಭ್ರಷ್ಟ್ಟಾಚಾರ ನಡೆದಿರುವ ಬಗ್ಗೆ ಸತತ ದೂರುಗಳು ಬರುತ್ತಿದ್ದರೂ ಸರ್ಕಾರ ಕುರುಡಾಗಿ, ಕಿವುಡಾಗಿ ವರ್ತಿಸುತ್ತದಲ್ಲದೇ, ಅಧಿಕಾರಿಗಳು ಸಲ್ಲಿಸುವ ಸುಳ್ಳು ಅಂಕಿ ಸಂಖ್ಯೆಗಳನ್ನು ಕೇಂದ್ರಕ್ಕೆ ರವಾನಿಸಿ ಅಲ್ಲಿನವರ ಕಣ್ಣಿಗೆ ಮಂಕುಬೂದಿ ಎರಚಲು ಪ್ರಯತ್ನಿಸಿತು ಎಂಬುದು ಅತ್ಯಂತ ನೋವಿನ ಸಂಗತಿ.

ಇದು ಕೇವಲ ಒಂದು ಉದಾಹರಣೆಯಷ್ಟೆ. ಮಂತ್ರಿ ಮಾನ್ಯರಿಂದ ಅದ್ಭುತವಾದ ಭ್ರಷ್ಟಾಚಾರ, ಸಾರ್ವಜನಿಕ ಹಣ ಲೂಟಿ ಇಡೀ ಸರ್ಕಾರದ ಯಂತ್ರಕ್ಕೆ ವ್ಯಾಪಿಸಿದ್ದು, ಅಧಿಕಾರಿಶಾಹಿ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ.Accountability ಹಾಗೂ sense of responsibility ಎರಡೂ ಮರೆಯಾಗುತ್ತಿದೆ. ೨೦೦೯-೧೦ ವರ್ಷವೊಂದರಲ್ಲೇ ಕೇಂದ್ರ ಸರ್ಕಾರದಿಂದ ಅನುದಾನವಾಗಿ ಬಂದ ೧೧,೮೭೮ ಕೋಟಿ ರೂಪಾಯಿ ನೆರವನ್ನು ವಿನಿಯೋಗಿಸದೆ, ವಾಪಸ್ಸು ನೀಡಬೇಕಾಗಿ ಬಂದದ್ದು ಅಧಿಕಾರಿಗಳ ಅದಕ್ಷತೆಗೆ ಕನ್ನಡಿ ಹಿಡಿದಂತಿದೆ. ಹಣವೇ ಇಲ್ಲದೇ ನೀರಾವರಿ ಯೋಜನೆಗಳು ಸೊರಗುತ್ತಿರುವಾಗ ಕೇಂದ್ರ ಸರ್ಕಾರ ನೀಡಿದ್ದ ೧೦೦೦ ಕೋಟಿ ರೂಪಾಯಿ ಅಧಿಕಾರಿಗಳ ನಿರ್ಲಕ್ಷದಿಂದ ಹಿಂತಿರುಗಿತು. ಕಾಮಗಾರಿಗಳನ್ನು ಯಾರು ನಿರ್ವಹಿಸಬೇಕು ಎಂಬ ತಾಕಲಾಟದಲ್ಲಿಯೇ ವರ್ಷ ಕಳೆದ ಪೌರಾಡಳಿತ ಇಲಾಖೆ ೨೨೫ ಕೋಟಿ ರೂಪಾಯಿ ಅನುದಾನವನ್ನು ವ್ಯರ್ಥ ಮಾಡಿಕೊಂಡಿತು. ಖಾಸಗಿ ಕಾಲೇಜುಗಳನ್ನು ಅನುದಾನ ಸಂಹಿತೆ ವ್ಯಾಪ್ತಿಗೆ ತರುವ ವಿಷಯದಲ್ಲಿ ರಾಜ್ಯ ಸರ್ಕಾರ ಅನುಸರಿಸಿದ ವಿಳಂಬ ನೀತಿಯಿಂದಾಗಿ ೩೦೦ ಕೋಟಿ ರೂ ಮುಟ್ಟುಗೋಲಾಯಿತು.
ವಾಸ್ತವಿಕ ಸಾಮರ್ಥ್ಯಕ್ಕಿಂತಲೂ ದೊಡ್ಡ ಪ್ರಮಾಣದ ಅಂದಾಜು ನಮೂದಿಸಿ (inflated budget) ಬಜೆಟ್ ಇಡುವ ಸಂಪ್ರದಾಯ ಯಡಿಯೂರಪ್ಪನವರಿಂದಲೇ ಆರಂಭವಾಯಿತು. ದಿನೇ ದಿನೇ ಬಜೆಟ್‌ನಲ್ಲಿ ಅಂದಾಜು ಜಾಸ್ತಿಯಾಗುತ್ತಾ ಹೋಯಿತೇ ಹೊರತಾಗಿ ಆ ಅಂದಾಜಿಗೆ ಅನುಗುಣವಾಗಿ ತೆರಿಗೆ/ಸಂಪನ್ಮೂಲಗಳ ಸಂಗ್ರಹಣೆಯಲ್ಲಿ ಆಗಬೇಕಾದ ಹೆಚ್ಚಳ ಸಾಧ್ಯವಾಗಲಿಲ್ಲ. ಪರಿಣಾಮ ವರ್ಷೆ ವರ್ಷೆ ವಿತ್ತೀಯ ಕೊರತೆಯ ಪ್ರಮಾಣ ಏರುತ್ತಿದ್ದು ಈ ವರ್ಷ ಅದು ೧೨,೮೪೮ ಕೋಟಿ ರೂಪಾಯಿ ಮುಟ್ಟುವ ಅಪಾಯವಿದೆ.

ರಾಜಸ್ವ ಸಂಗ್ರಹಣೆಯಲ್ಲಿ ವಿಫಲಗೊಂಡ ರಾಜ್ಯ ಸರ್ಕಾರ ನಿರ್ವಹಣೆಯ ಸಲುವಾಗಿ ಕೇಂದ್ರದ ಅನುದಾನಕ್ಕೆ ಕೈಚಾಚಬೇಕಾದ ಪರಿಸ್ಥಿತಿ ಇದೆ. ಜೊತೆಗೆ ಅಪಾರ ಪ್ರಮಾಣದ ಸಾಲಗಳನ್ನು ಎತ್ತಿ ಸರ್ಕಾರ ನಡೆಸುವಂತಾಗಿದೆ. ೨೦೦೪-೦೫ ರಲ್ಲಿ ೪೦ ಸಾವಿರ ಕೋಟಿ ರೂಪಾಯಿಗಳಷ್ಟಿದ್ದ ಸಾಲದ ಪ್ರಮಾಣ ಇದೀಗ ೧ ಲಕ್ಷ ಕೋಟಿಯ ಗಡಿಯನ್ನು ದಾಟಿದೆ.
ಬಿಜೆಪಿ ಸರ್ಕಾರ ಬಂದಾಗಿನಿಂದ ಇದುತನಕ ೪೦ ಸಾವಿರ ಕೋಟಿ ಸಾಲವನ್ನು ಪಡೆಯಲಾಗಿದೆ. ಇದರಲ್ಲಿ ಶೇ ೮೦ ರಷ್ಟು ಸಾಲವನ್ನು ಶೇ ೮ ರಿಂದ ೧೦ ಬಡ್ಡಿ ದರದ ಮೇಲೆ ಪಡೆಯಲಾಗಿದ್ದು, ಕೇವಲ ಬಡ್ಡಿ ಪಾವತಿಗಾಗಿಯೇ ನಾವು ವರ್ಷಂ ಪ್ರತಿ ೧೦ ಸಾವಿರ ಕೋಟಿ ರೂಪಾಯಿ ತೆರಬೇಕಾಗಿದೆ. ಇದರ ಜೊತೆಗೆ ಸರ್ಕಾರಿ ನೌಕರರ ಸಂಬಳ, ಸವಲತ್ತುಗಳನ್ನು ಮೂರು ವರ್ಷದಲ್ಲಿ ಎರಡು ಬಾರಿ ಪರಿಷ್ಕರಿಸಲಾಗಿದ್ದು(ಪ್ರತಿ ೫ ವರ್ಷಕ್ಕೊಮ್ಮೆ ವೇತನ ಶ್ರೇಣಿ ಪರಿಷ್ಕರಣೆ ನಡೆಯಬೇಕು ಆದರೆ ಇಲ್ಲಿ ಮೂರನೆ ವೇತನ ಪರಿಷ್ಕರಣಾ ಸಮಿತಿ ಈಗಾಗಲೇ ಕಾರ್ಯಾರಂಭ ಮಾಡಿದೆ) ೧೮೦೩೪ ಕೋಟಿ ಸಂಬಳ ಹಾಗೂ ೬೫೭೦ ಕೋಟಿ ನಿವೃತ್ತಿ ವೇತನವಾಗಿ ನೀಡಲಾಗುತ್ತಿದೆ. ಸರ್ಕಾರದ ಅನುತ್ಪಾದಕ ವೆಚ್ಚಗಳೂ ಹೆಚ್ಚಾಗುತ್ತಿದ್ದು ಭಾಗ್ಯಲಕ್ಷ್ಮಿ, ಸೈಕಲ್ ವಿತರಣೆಯಂತಹ ಜನಪ್ರಿಯ ಯೋಜನೆಗಳ ಅನುಷ್ಠಾನದಿಂದಾಗಿ ವರ್ಷಂಪ್ರತಿ ೨೫೦-೩೦೦ ಕೋಟಿ ರೂಪಾಯಿ ಅಧಿಕಾರಸ್ಥರ ಖಾಸಗಿ ತಿಜೋರಿ ಸೇರುತ್ತಿದೆ. ಸುವರ್ಣ ಭೂಮಿ ಯೋಜನೆಯಲ್ಲಿ ಬಿಜೆಪಿ ಪರ ರೈತರಿಗೇ ಮೊದಲ ಮಣೆ. ಇಂತಹ ಜನಪ್ರಿಯ ಯೋಜನೆಗಳ ಮೇಲಿನ ವೆಚ್ಚ ಹೆಚ್ಚಿದಂತೆಲ್ಲ ಆದ್ಯತಾ ವಲಯದ ಯೋಜನೆಗಳು ಹಣವಿಲ್ಲದೆ ಸೊರಗುತ್ತಿವೆ. ತೆರಿಗೆ ಸಂಗ್ರಹಣೆಯಲ್ಲಿ ಅಧಿಕಾರ ವೃಂದ ವಿಫಲವಾಗಿದ್ದು, ೨೦೧೦ ರ ವೇಳೆಗೆ ತೆರಿಗೆ ಬಾಕಿಯ ಮೊತ್ತ ೧೦ ಸಾವಿರ ಕೋಟಿ ರೂಪಾಯಿ ಮೀರಿದೆ. ಇದರ ಜೊತೆಗೆ ಸರ್ಕಾರವೇ ಜಾಮೀನಾಗಿ ನಿಂತು ಕೊಡಿಸಿರುವ ಸಾಲ ಸುಮಾರು ೬೦ ಸಾವಿರ ಕೋಟಿ ಗುರಿದಾಟಿದೆ. ಇದರ ಜೊತೆಗೆ ರಾಜ್ಯ ಸರ್ಕಾರವೇ ಸಾಕುತ್ತಿರುವ ಸಾರ್ವಜನಿಕ ಉದ್ದಿಮೆಗಳೆಂಬ ಬಿಳಿಯಾನೆ ಸಂಸ್ಥೆಗಳಲ್ಲಿ ೮೦ ಸಾವಿರ ಕೋಟಿ ರೂಪಾಯಿ ಸಾರ್ವಜನಿಕರ ಹಣ ತೊಡಗಿಸಲಾಗಿದ್ದು ಇದರಿಂದ ವರ್ಷಂಪ್ರತಿ ಬರುತ್ತಿರುವ ವರಮಾನ ಕೇವಲ ೧ ಸಾವಿರ ಕೋಟಿ ರೂಪಾಯಿಗಳಿಗಿಂತಲೂ ಕಡಿಮೆ. ೧೦೫ ರಷ್ಟಿದ್ದ ಸಾರ್ವಜನಿಕ ಉದ್ದಿಮೆಗಳನ್ನು ೮೦ ಕ್ಕೆ ಇಳಿಸಲಾಗಿದೆ ಯಾದರೂ ಈ ಪೈಕಿ ೭೨ ಉದ್ದಿಮೆಗಳು ಸತತವಾಗಿ ನಷ್ಟ ಅನುಭವಿಸುತ್ತಿರುವ ದಾಖಲೆಯನ್ನು ಸ್ಥಾಪಿಸಿವೆ. ಇಷ್ಟಾಗಿಯೂ ಈ ನಿಗಮ/ಉದ್ದಿಮೆಗಳನ್ನು ಮುಚ್ಚಲು ಸರ್ಕಾರಕ್ಕೆ ನೂರಾರು ಅಡ್ಡಿ-ಆತಂಕಗಳು. ಬೆಂಗಳೂರಲ್ಲಿ ಸಾವಿರಾರು ಖಾಸಗಿ ಐಟಿ ಕಂಪನಿಗಳು ಯಶಸ್ವಿಯಾಗಿ ೪೦ ಸಾವಿರ ಕೋಟಿ ರೂಪಾಯಿಗಳಷ್ಟು ವರಮಾನ ತಂದುಕೊಟ್ಟರೆ, ನಮ್ಮ ಸರ್ಕಾರದ ಸಂಸ್ಥೆಯಾದ ಕಿಯೋನಿಕ್ಸ್ ಸತತ ೧೭ ವರ್ಷಗಳಿಂದ ನಷ್ಟದಲ್ಲಿಯೇ ನಡೆದಿದೆ. ಲಾಭಗಳಿಸಬೇಕಾದ ಮಾರಾಟ ಸಂಸ್ಥೆಗಳು, ವಿತ್ತೀಯ ನಿಗಮಗಳು ಸೋರಿಕೆ ಸೇರಿದಂತೆ ನಾನಾ ಕಾರಣಗಳಿಂದಾಗಿ ನಿರೀಕ್ಷಿತ ಲಾಭ ಮಾಡದೇ ಹೋದರೆ, ಸಾರ್ವಜನಿಕ ಹಿತಾಸಕ್ತಿಗೆಂದೇ ಸ್ಥಾಪಿಸಲ್ಪಟ್ಟ ರಸ್ತೆ ಸಾರಿಗೆ ಸಂಸ್ಥೆಗಳು, ವಿದ್ಯುಚ್ಛಕ್ತಿ ನಿಗಮಗಳು ಕ್ಷುಲ್ಲಕ ಕಾರಣಗಳಿಂದಾಗಿ ದರ ಏರಿಕೆ ಮಾಡುತ್ತಾ ಕೋಟಿ ಕೋಟಿ ರೂಪಾಯಿ ಲಾಭ ತೋರಿಸುತ್ತಾ ಸಾರ್ವಜನಿಕರ ಶೋಷಣೆಯಲ್ಲಿ ತೊಡಗಿವೆ. ಇವುಗಳು ದಾಖಲೆ ಲಾಭ ಮಾಡುವ ಅಗತ್ಯವಿಲ್ಲ ನಷ್ಟವಾಗದಂತೆ ದರವನ್ನು ಏರುತ್ತಿರುವ ವೆಚ್ಚಕ್ಕೆ ಸರಿದೂಗಿಸಿಕೊಂಡರೆ ಸಾಕು. ಸಾರ್ವಜನಿಕ ಸಂಸ್ಥೆಗಳ ಸ್ಥಾಪನೆಯ ಉದ್ದೇಶ ಕೂಡ ಅದೇ ಆಗಿದೆ ಎಂಬ ಸಾಮಾನ್ಯ ಜ್ಞಾನ ಕೂಡ ಈ ಸಂಸ್ಥೆಗಳನ್ನು ನಡೆಸುವ ಅಧಿಕಾರಸ್ಥರಲ್ಲಿ ಇದ್ದಂತಿಲ್ಲ.

ರಾಜ್ಯ ಸರ್ಕಾರದ ವೈಫಲ್ಯತೆಯ ಹಲವು ಉದಾಹರಣೆಗಳನ್ನು ಇಲ್ಲಿ ನೀಡಿದ್ದೇನೆ.

೨೦೦೯ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ರಾಜ್ಯದ ೧೫ ಜಿಲ್ಲೆಗಳಲ್ಲಿ ಅತಿವೃಷ್ಟಿ. ಪ್ರವಾಹ ಪರಿಸ್ಥ್ಥಿತಿ ಉಂಟಾಗಿ ೨೨೯ ಜನ ಮೃತರಾಗಿ ೭೦೦ಕ್ಕೂ ಹೆಚ್ಚು ಜಾನುವಾರುಗಳು ಅಸುನೀಗಿದವು. ೭ ಲಕ್ಷ ಮನೆಗಳು ನಾಶವಾಯಿತು. ೧೮ ಸಾವಿರ ಕೋಟಿ ರೂ ನಷ್ಟವಾಯಿತು. ಪರಿಸ್ಥ್ಥಿತಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ೧೯೧೭ ಕೋಟಿ ನೆರವು ನೀಡಿತು. ಸಾರ್ವಜನಿಕರಿಂದ ಉದಾರ ದೇಣಿಗೆಯ ರೂಪದಲ್ಲಿ ೪೧೬ ಕೋಟಿ ರೂಪಾಯಿ ಹರಿದು ಬಂತು ಎರಡು ವರ್ಷಗಳು ಉರುಳಿದರೂ ದಾನಿಗಳು ನಿರ್ಮಿಸಿದ ಮನೆಗಳು ಸೇರಿದಂತೆ ಒಟ್ಟು ನಿರ್ಮಾಣಗೊಂಡ ಮನೆಗಳ ಸಂಖ್ಯೆ ೩೦೦೦ ಮೀರಿಲ್ಲ. ಏಕೆಂದರೆ ಈ ಎಲ್ಲ ಹಣ ಮಾಯವಾದದ್ದು ಎಲ್ಲಿ?

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು ತನಕ ಒಂದೇ ಒಂದು ಯೂನಿಟ್ ವಿದ್ಯತ್‌ನ್ನು ಹೊಸದಾಗಿ ಉತ್ಪಾದಿಸಲಾಗಿಲ್ಲ. ಜಲ, ಉಷ್ಣ, ನವೀಕರಿಸಬಹುದಾದ ಇಂಧನ ಮೂಲಗಳಿಂದ ಸ್ಥಾಪಿತ ಸಾಮರ್ಥ್ಯದ ೧೧,೨೦೦ ಮೆಗಾವ್ಯಾಟ್. ಇದರ ಅರ್ಧದಷ್ಟನ್ನೂ ಉತ್ಪಾದಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಕೇಂದ್ರದ ಗ್ರಿಡ್‌ನಿಂದ ಬರುವ ಪುಕ್ಕಟ್ಟೆ ವಿದ್ಯುತ್ ಸೇರಿಸಿದರೂ ನಮ್ಮ ದೈನಂದಿನ ಬೇಡಿಕೆಯಾದ ೮೬೦೦ ಮೆ.ವ್ಯಾಟ್ ವಿದ್ಯುತ್ ದೊರಕುತ್ತಿಲ್ಲ. ಈ ಕೊರತೆ ನಿವಾರಣೆಗಾಗಿ ಶಾಶ್ವತ ಪರಿಹಾರ ಹುಡುಕುವ ಬದಲು ರಾಜ್ಯ ಸರ್ಕಾರ ಹಣ ಖರ್ಚು ಮಾಡಿ, ಬಹಿರಂಗ ಮಾರುಕಟ್ಟೆಯಲ್ಲಿ ವಿದ್ಯುತ್ ಖರೀದಿಸಲು ಹೊರಟಿದ್ದು, ಕಳೆದ ಮೂರು ವರ್ಷಗಳಲ್ಲಿ ಇದೊಂದೇ ಬಾಬಿಗಾಗಿ ಸರಿ ಸುಮಾರು ಆರು ಸಾವಿರ ಕೋಟಿ ಖರ್ಚುಮಾಡಿದೆ. ಪ್ರತಿ ದಿನ ೧೦೦೦ ಮೆಗಾವ್ಯಾಟ್ ವಿದ್ಯುತ್ ಕೊಳ್ಳಲಾಗುತ್ತಿದ್ದು ಈ ಪೈಕಿ, ವಿತರಣೆ ಹಾಗೂ ಪ್ರಸರಣದಲ್ಲಿ ಆಗುವ ಶೇ ೨೮ ರಷ್ಟು ನಷ್ಟವನ್ನು ಪರಿಗಣಿಸಿದರೆ ನಮಗೆ ಪ್ರತಿದಿನ ಸಿಗುತ್ತಿರುವ ವಿದ್ಯುತ್ ಕೇವಲ ೭೨೦ ಮೆ.ವ್ಯಾಟ್ ಮಾತ್ರ. ಹಲವು ಖಾಸಗಿ ಕಂಪನಿಗಳು ಈ ವಿದ್ಯುತ್‌ನ್ನು ಪೂರೈಸುತ್ತಿದ್ದು ದಾರಾಳ ಕಿಕ್ ಬ್ಯಾಕ್ ಸಲ್ಲಿಕೆಯಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿವೆ.

ತಾತ್ಕ್ಕಾಲಿಕವಾಗಿ ಹೀಗೆ ಹಣ ಖರ್ಚುಮಾಡಿ, ವಿದ್ಯುತ್ ಖರೀದಿಸುವ ಬದಲು ಇದೇ ಹಣವನ್ನು ವಿನಿಯೋಗಿಸಿ ನಿರ್ಮಾಣ ಹಂತದಲ್ಲಿರುವ ಹಲವು ವಿದ್ಯುತ್ ಯೋಜನೆಗಳನ್ನು ಪೂರ್ಣಗೊಳಿಸಿ ಹೆಚ್ಚುವರಿ ವಿದ್ಯುತ್ ಉತ್ಪಾದಿಸಿ ಹೆಚ್ಚುವರಿ ವಿದ್ಯುತ್ ಉತ್ಪಾದಿಸಬಹುದಾದ ಸುವರ್ಣಾವಕಾಶವನ್ನು ರಾಜ್ಯ ಸರ್ಕಾರ ಕಳೆದುಕೊಂಡಿದೆ.

ರೈತರ ಪಂಪ್ ಸೆಟ್‌ಗಳಿಗೆ ದಿನವಿಡೀ ಉಚಿತವಾಗಿ ವಿದ್ಯುತ್ ನೀಡುತ್ತೇವೆ ಅಂತ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಮಾಡಿದ್ದೇನು? ಅಕ್ರಮ ಸಂಪರ್ಕಗಳು ಎಂಬ ನೆಪದಲ್ಲಿ ೧೫ ಲಕ್ಷಕ್ಕೂ ಹೆಚ್ಚು ಸಂಪರ್ಕಗಳನ್ನು ಕಿತ್ತು ಹಾಕಿದ್ದು ಇದೀಗ ೧೫ ತಿಂಗಳ ಅಕ್ರಮ ಬಳಕೆಯ ಶುಲ್ಕವನ್ನು ಭರಿಸಿದರೆ ಮಾತ್ರ ವಿದ್ಯುತ್ ಸಂಪರ್ಕಗಳನ್ನು ನೀಡಲಾಗುತ್ತಿದೆ. ಶುಲ್ಕಭರಿಸಿ ಸಂಪರ್ಕ ಪಡೆದರೂ, ನೀಡಲಾಗುತ್ತಿರುವ ವಿದ್ಯುತ್ ಅವಧಿ ದಿನಕ್ಕೆ ೩ ಘಂಟೆಗಳು ಮಾತ್ರ.

ಆರ್ಥಿಕ ಅವಾಂತರಗಳು ಇಲ್ಲಿಗೆ ನಿಂತಿಲ್ಲ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ ವೇತನಗಳಂತಹ ಬಡ ಜನರಿಗೆ ತಲುಪಬೇಕಾದ ಹಣ ತಿಂಗಳುಗಟ್ಟಲೆ ಬಾಕಿ ಉಳಿದಿವೆ. ಅನುದಾನಿತ ಶಾಲೆಗಳ ಉಪಾದ್ಯಾಯರಿಗೆ ಮೂರು ವರ್ಷಗಳಿಂದ ವೇತನ ಸಿಕ್ಕಿಲ್ಲ. ಲೋಕೋಪಯೋಗಿ ಇಲಾಖೆ ಒಂದರಲ್ಲೇ ೩೫೦೦ ಕೋಟಿ ರೂಪಾಯಿ ಮೊತ್ತದ ಬಿಲ್‌ಗಳು ಪಾವತಿಯಾಗದೆ ಉಳಿದಿವೆ. ಆಹಾರ, ವಿದ್ಯುಚ್ಛಕ್ತಿ, ಸಾರಿಗೆ, ಉದ್ದಿಮೆಗಳು ಕೃಷಿ ಮೇಲಿನ ಸಬ್ಸಿಡಿಗಾಗಿ ೬೨೪೨ ಕೋಟಿ ಕೊಡ್ತಾ ಇದ್ದೇವೆ ಎಂದು ಸರ್ಕಾರ ಜಾಹಿರಾತುಗಳಲ್ಲಿ ಹೇಳಿಕೊಳ್ಳುತ್ತಿದ್ದರೂ ಬಿಪಿಎಲ್ ಕಾರ‍್ಡುಗಳಿಗೆ ಆಹಾರ ಧಾನ್ಯ ನೀಡದೆ ಸಂಪೂರ್ಣ ನಿಂತಿದೆ. ಆಶ್ರಯ ಮನೆಗಳ ಗಂಗಾಕಲ್ಯಾಣ ಇತ್ಯಾದಿ ಯೋಜನೆಗಳ ಫಲಾನುಭವಿಗಳಿಗೆ ಸಾಲ ಮನ್ನಾ ಮಾಡ್ತೇವೆ ಅಂತ ಅಧಿಕಾರಕ್ಕೆ ಬರುವ ಮೊದಲು ಹೇಳಿದ ಬಿಜೆಪಿ ಈಗ ಸಾಲವನ್ನು ಒಂದೇ ಕಂತಿನಲ್ಲಿ ತೀರಿಸಿ, ಬಡ್ಡಿ ಮನ್ನಾ ಮಾಡುತ್ತೇವೆ ಅಂತ ಹೇಳ್ತಾ ಇದೆ.

ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸುವುದೇ ಅನಗತ್ಯವೆನಿಸುತ್ತದೆ. ನೇಮಕಾತಿಯಲ್ಲಿ ಹಣತಿಂದ ಆರೋಪದ ಮೇಲೆ ಮಂತ್ರಿಯೊಬ್ಬರು ಮಾಜಿ ಆಗಿ ಮನೆ ಸೇರಿದರು, ಮತ್ತೊಬ್ಬ ಮಂತ್ರಿ ಜೈಲು ಕಂಡರು, ಸಾರ್ವಜನಿಕರಿಂದ ನಿವೇಶನ ನೀಡುವ ಭರವಸೆ ನೀಡಿ ೩೭ ಕೋಟಿ ರೂಪಾಯಿ ಕಬಳಿಸಿರುವ ಕ್ರಿಮಿನಲ್ ಆರೋಪ ಹೊತ್ತಿರುವ ವ್ಯಕ್ತಿಯನ್ನು ಮಂತ್ರಿ ಮಾಡಲಾಗಿದೆ. ಮೂರು ವರ್ಷಗಳ ಅವಧಿಯಲ್ಲಿ ನಡೆದ ೨೪೦೦ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ, ೪೦೦ ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ೮೦೦೦ ಪೊಲೀಸ್ ಕಾನ್‌ಸ್ಟೆಬಲ್‌ಗಳು, ಇವರುಗಳ ನೇಮಕಾತಿಯಲ್ಲಿ ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆದಿದೆ.

ಸಂಶಯಾತೀತವಾಗಿ ವರ್ತಿಸಬೇಕಾದ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರ ದರುಪಯೋಗದಂತಹ ಕಳಂಕಗಳು ಬಡಿದಿವೆ. ಅದರ ಮಾಜಿ ಅಧ್ಯಕ್ಷರೇ ನಿರೀಕ್ಷಣಾ ಜಾಮೀನು ಪಡೆಯಲು ನ್ಯಾಯಾಂಗದ ಮೊರೆ ಹೋಗಿದ್ದಾರೆ. ಸತ್ಯಸಂಧ ಪ್ರಾಮಾಣಿಕ ಲೋಕಾಯುಕ್ತರ ಮೂಗಿನ ಕೆಳಗೆ ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಹಲವು ಅಧಿಕಾರಿಗಳನ್ನು ಅಲ್ಲಿಂದ ಕಿತ್ತುಹಾಕಲಾಗಿದೆ. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಒಂದು ಕಂಪನಿಯ ವಕ್ತಾರ ನೀಡಿದ ಲಂಚ ಪಡೆದ ೭೦೦ಕ್ಕೂ ಹೆಚ್ಚು ಅಧಿಕಾರಿಗಳ, ಪತ್ರಕರ್ತರ ಪಟ್ಟಿ ಪ್ರಕಟಗೊಂಡು ಹಲವಾರು ದಿನಗಳೇ ಉರುಳಿದರೂ, ಆರೋಪಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಕೆಲಸ ಆರಂಭಿಸಲು ಸರ್ಕಾರಕ್ಕೆ ಯಾವುದೇ ಇಚ್ಚಾಶಕ್ತಿ ಇದ್ದಂತೆ ಕಾಣುತ್ತಿಲ್ಲ. ಜಗತ್ತಿಗೆ ಬುದ್ಧಿ ಹೇಳುವ ಬೃಹಸ್ಪತಿಗಳಾದ ಪತ್ರಕರ್ತರು ತಮ್ಮ ಮೇಲಿನ ಆರೋಪಗಳ ಬಗ್ಗೆ ಸಮಜಾಯಿಷಿ ನೀಡುವ ಕನಿಷ್ಠ ಸೌಜನ್ಯವನ್ನೂ ತೋರಿಸುತ್ತಿಲ್ಲ. ಇದೆಂತ ನೈತಿಕ ಅಧ:ಪತನ?

ಹೀಗೆ ಕುಸಿಯುತ್ತಿರುವ ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಸದಾನಂದಗೌಡರು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದರೂ, ಅವರ ಸಂಪುಟದ ಸಹೋದ್ಯೋಗಿಗಳೇ ಅವರ ಮಾತನ್ನು ಕೇಳದ ಪರಿಸ್ಥಿತಿ ಉದ್ಭವಿಸಿದೆ. ಆಡಳಿತ ಪಕ್ಷದಲ್ಲಿ ಎರಡು ಬಣಗಳ ತಿಕ್ಕಾಟ ಆಡಳಿತದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ. ಮಂತ್ರಿಗಳೆಷ್ಟೋ ಮಂದಿ ವಿಧಾನಸೌಧ ಕಛೇರಿಗೆ ಕಾಲಿರಿಸುವ ಕೃಪೆಯನ್ನೇ ತೋರಿಸುತ್ತಿಲ್ಲ.

ಮುಂದೆ ದಾರಿ ಕಾಣುವುದೆಂತೋ ಕಾದು ನೋಡಬೇಕು?

ಪುಟದ ಮೊದಲಿಗೆ
Votes: 6 Rating: 4

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ